ತುಮಕೂರಿನಿಂದ ಅಯೋಧ್ಯೆಗೆ ತೆರಳಿದ ಮೊದಲ ರೈಲು

| Published : Feb 08 2024, 01:30 AM IST

ಸಾರಾಂಶ

ಅಯೋಧ್ಯೆಗೆ ಕರ್ನಾಟಕದಿಂದ ಅದರಲ್ಲೂ ಕಲ್ಪತರುನಾಡು ತುಮಕೂರಿನಿಂದ ತೆರಳಿದ ಮೊಟ್ಟ ಮೊದಲ ರೈಲಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಬುಧವಾರ ಮುಂಜಾನೆ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಅಯೋಧ್ಯೆಗೆ ಕರ್ನಾಟಕದಿಂದ ಅದರಲ್ಲೂ ಕಲ್ಪತರುನಾಡು ತುಮಕೂರಿನಿಂದ ತೆರಳಿದ ಮೊಟ್ಟ ಮೊದಲ ರೈಲಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ವಿದ್ಯುಕ್ತವಾಗಿ ಬುಧವಾರ ಮುಂಜಾನೆ ಚಾಲನೆ ದೊರೆಯಿತು.

ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ತೆರಳಿದ ಜಿಲ್ಲೆಯ ರಾಮ ಭಕ್ತರಿಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಸಕರು, ಬಿಜೆಪಿ ಮುಖಂಡರು ಶುಭ ಕೋರಿ ಬೀಳ್ಕೊಟ್ಟರು.

ಮುಂಜಾನೆ ನಗರದಿಂದ ಹೊರಟ ತುಮಕೂರು-ಅಯೋಧ್ಯೆ ಧಾಮ ಆಸ್ತಾ ವಿಶೇಷ ರೈಲಿನಲ್ಲಿ ಜಿಲ್ಲೆಯ 180 ಕ್ಕೂ ಅಧಿಕ ಪ್ರಯಾಣಿಕರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಇಲಾಖೆಯ ಡಿಆರ್‌ಎಂ ಯೋಗೀಶ್ ಮೋಹನ್, ತುಮಕೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ಸಂಚಾರ ಆರಂಭವಾಗಿದೆ. ಮುಂಜಾನೆ 5.45ಕ್ಕೆ ಸುಮಾರು ೧೮೦ ಪ್ರಯಾಣಿಕರು ತುಮಕೂರಿನಿಂದ ಈ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದು, ಅರಸೀಕೆರೆಯಿಂದ ಇನ್ನುಹೆಚ್ಚಿನ ಪ್ರಯಾಣಿಕರು ತೆರಳುತ್ತಿದ್ದಾರೆ ಎಂದರು.

ಸುಮಾರು 58 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಾಗಿದ್ದು, ಪ್ರಯಾಣಿಕರ ಸುರಕ್ಷಿತೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆಹಾರದೊಂದಿಗೆ ಮಲಗುವ ಕೋಣೆಗಳನ್ನು ಒದಗಿಸಲಾಗಿದೆ. ಈ ರೈಲಿಗೆ ಸದಾ ಆರ್‌ಪಿಎಫ್ ಬೆಂಗಾವಲು ಸಹ ಇರಲಿದೆ ಎಂದರು.

ಪ್ರತಿ 4 ದಿನಗಳಿಗೊಮ್ಮೆ ಕರ್ನಾಟಕದ ಬೇರೆ ಬೇರೆ ನಿಲ್ದಾಣಗಳಿಂದ ಅಯೋಧ್ಯೆಗೆ ರೈಲು ತೆರಳಲಿದೆ ಎಂದು ಹೇಳಿದರು.

ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಕರ್ನಾಟದಿಂದ ಮೊದಲ ತಂಡವಾಗಿ ಜಿಲ್ಲೆಯ ಭಕ್ತರು ಅಯೋಧ್ಯೆಗೆ ಹೊರಟಿದ್ದಾರೆ. ಅವರಿಗೆ ರೈಲ್ವೆ ಇಲಾಖೆ ಅಗತ್ಯ ಸೌಕರ್ಯ, ರಕ್ಷಣೆ ಒದಗಿಸಿದೆ. ದೇಶದ ಜನರ ಆಶಯದಂತೆ ಜನವರಿ 22 ರಂದು ಪ್ರಧಾನಿ ಮೋದಿಯವರ ಯಜಮಾನಿಕೆಯಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ಧರ್ಮಕ್ಷೇತ್ರವಾಗಿ ಅಯೋಧ್ಯೆ ಭಕ್ತರನ್ನು ಆಕರ್ಷಿಸಿದೆ ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಭಾರತೀಯದ ಧರ್ಮ ತಳಹದಿಯಾಗಿರುವ ಭಕ್ತಿಯ ಆರಾಧನಾ ಕೇಂದ್ರವಾಗಿ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣವಾಗಿದೆ. ಈ ಕಾರ್ಯದ ನೇತೃತ್ವ ವಹಿಸಿ ಪ್ರಧಾನಿ ಮೋದಿಯವರು ದೇಶದ ಭಕ್ತರ ಕನಸು ನನಸು ಮಾಡಿದ್ದಾರೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಐದು ಶತಮಾನಗಳ ಹೋರಾಟದ ಹಿಂದೆ ಹಲವಾರು ಕರಸೇವಕರು, ಭಕ್ತರ ತ್ಯಾಗ, ಬಲಿದಾನವಿದೆ. ಅಯೋಧ್ಯೆ ಶ್ರೀ ರಾಮನ ದರ್ಶನಕ್ಕೆ ಹೋಗುವ ಭಕ್ತರಿಗಾಗಿ ತುಮಕೂರಿನಿಂದ ವಿಶೇಷ ರೈಲು ಸೇವೆ ಒದಗಿಸಿ ರೈಲ್ವೆ ಇಲಾಖೆ ಅನುಕೂಲ ಮಾಡಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್‌ ಮಾತನಾಡಿ, ಜಿಲ್ಲೆಯ ಭಕ್ತರು ಸಂಭ್ರಮ, ಸಡಗರದಿಂದ ಅಯೋಧ್ಯೆ ಶ್ರೀ ರಾಮ ದರ್ಶನಕ್ಕಾಗಿ ಆರು ದಿನಗಳ ಪ್ರವಾಸ ಹೊರಟಿದ್ದಾರೆ. ತಲಾ 3 ಸಾವಿರ ರು. ಪಾವತಿಸಿ ರೈಲು ಪ್ರಯಾಣ ಮಾಡುತ್ತಿರುವ ಯಾತ್ರಿಕರಿಗೆ ರೈಲ್ವೆ ಇಲಾಖೆ ಎಲ್ಲಾ ರೀತಿಯ ಸೇವಾಸೌಲಭ್ಯ ಒದಗಿಸಿದೆ ಎಂದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್‌ ಮಾತನಾಡಿ, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿ ಅಯೋಧ್ಯೆ ಜಗತ್ತಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳಾದ ಎಡಿಆರ್‌ಎಂ ಕುಸುಮ ಹರಿಪ್ರಸಾದ್, ಕೃಷ್ಣ ಚೈತನ್ಯ, ಡಾ. ಭಾರ್ಗವಿ, ಅಯೋಧ್ಯೆ ಯಾತ್ರೆಯ ಸಂಚಾಲಕ ಜಗದೀಶ್ ಹಿರೇಮನೆ, ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಡಾ. ಪರಮೇಶ್, ಮಾಧಮ ಸಂಚಾಲಕ ಟಿ.ಆರ್‌. ಸದಾಶಿವಯ್ಯ, ವಕ್ತಾರ ಜಗದೀಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್. ಮಲ್ಲಿಕಾರ್ಜುನಯ್ಯ, ಸಿ.ಎನ್. ರಮೇಶ್, ಮುಖಂಡರಾದ ಕೆ. ವೇದಮೂರ್ತಿ, ಚಂದ್ರಬಾಬು ಮತ್ತಿತರರು ಅಯೋಧ್ಯೆ ಯಾತ್ರಿಕರಿಗೆ ಶುಭ ಕೋರಿದರು.