ಸಾರಾಂಶ
ರೈತರು ಹೊರ ಜಿಲ್ಲೆಗಳಿಂದ ಹೆಚ್ಚಿನ ದರದಲ್ಲಿ ಮೀನುಮರಿಗಳನ್ನು ಖರೀದಿಸುವ ಬದಲು ತಮ್ಮ ಸುತ್ತಮುತ್ತಲಿನ ನೀರು ಲಭ್ಯವಿರುವ ಕೆರೆಯ ಅಂಚಿನಲ್ಲಿ ಮೀನುಮರಿಗಳನ್ನು ಬೆಳೆದು ಕೆರೆಗೆ ದಾಸ್ತಾನು ಮಾಡಬಹುದು. ಸರ್ಕಾರವು ಈ ಯೋಜನೆಗೆ ಖರೀದಿ ವೆಚ್ಚ, ಸಗಣಿ ಗೊಬ್ಬರ, ಬಾಡಿಗೆ ವೆಚ್ಚ, ಆಹಾರ ಖರೀದಿಗೆ ಸಂಬಂಧಿಸಿದಂತೆ ಸಹಾಯಧನ ನೀಡಲಾಗುತ್ತದೆ ಎಂದು ಮೀನುಗಾರಿಕೆ ಜಂಟಿ ನಿರ್ದೇಶಕ ಮೈಸೂರು ಗಣೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮೀನು ಪೌಷ್ಟಿಕಾಂಶಗಳ ಆಗರ ಹಾಗೆಯೇ ಮೀನು ಸಾಕಣೆ ಕಡಿಮೆ ಖರ್ಚಿನಲ್ಲಿ, ಸರ್ಕಾರದ ಧನಸಹಾಯದೊಂದಿಗೆ ಹೆಚ್ಚು ಲಾಭ ಗಳಿಸುವ ಪೂರಕ ವೃತ್ತಿ ಆದ್ದರಿಂದ ರೈತರು ಲಭ್ಯವಿರುವ ಜಲ ಸಂಪನ್ಮೂಲ ಬಳಸಿಕೊಂಡು ಅಧಿಕ ಲಾಭಗಳಿಸಬಹುದು ಎಂದು ಮೀನುಗಾರಿಕೆ ಜಂಟಿ ನಿರ್ದೇಶಕ ಮೈಸೂರು ಗಣೇಶ್ ಹೇಳಿದರು.2024-2025ನೇ ಸಾಲಿನ ರಾಜ್ಯವಲಯ ಯೋಜನೆಯಡಿ ತಾಲೂಕಿನ ತಳಲೂರು ಕೆರೆಯ ಅಂಚಿನಲ್ಲಿ ಮೀನುಮರಿ ಪಾಲನೆ ಮತ್ತು ಉತ್ಪಾದನೆ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರು ಹೊರ ಜಿಲ್ಲೆಗಳಿಂದ ಹೆಚ್ಚಿನ ದರದಲ್ಲಿ ಮೀನುಮರಿಗಳನ್ನು ಖರೀದಿಸುವ ಬದಲು ತಮ್ಮ ಸುತ್ತಮುತ್ತಲಿನ ನೀರು ಲಭ್ಯವಿರುವ ಕೆರೆಯ ಅಂಚಿನಲ್ಲಿ ಮೀನುಮರಿಗಳನ್ನು ಬೆಳೆದು ಕೆರೆಗೆ ದಾಸ್ತಾನು ಮಾಡಬಹುದು. ಸರ್ಕಾರವು ಈ ಯೋಜನೆಗೆ ಖರೀದಿ ವೆಚ್ಚ, ಸಗಣಿ ಗೊಬ್ಬರ, ಬಾಡಿಗೆ ವೆಚ್ಚ, ಆಹಾರ ಖರೀದಿಗೆ ಸಂಬಂಧಿಸಿದಂತೆ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು.ಉಪನಿರ್ದೇಶಕ ಜಿಲ್ಲಾ ಮಟ್ಟದ ಅಧಿಕಾರಿ ಎಮ್.ಎಚ್.ನಂಜುಂಡಪ್ಪ ಮಾತನಾಡಿ, ತಾಲೂಕಿನ ತಳಲೂರು ಕೆರೆಯ ಅಂಚಿನಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ 15 ಲಕ್ಷ ಸ್ಪಾನ್‌ಗಳನ್ನು ಕೊಳದಲ್ಲಿ ಬಿಟ್ಟು 30 ದಿನಗಳಲ್ಲಿ 3 ಲಕ್ಷ ಕಾಟ್ಲ ಜಾತಿ ಮೀನುಮರಿಗಳನ್ನು ಉತ್ತಮವಾಗಿ ಬೆಳೆದು ಅಧಿಕ ಆದಾಯ ಪಡೆಯುವ ನಿರೀಕ್ಷೆ ಸಂತಸದ ವಿಚಾರವಾಗಿದೆ. ಈ ಬರದ ನಾಡಿನಲ್ಲಿ ರೈತನ ಕೈ ಹಿಡಿದ ಮೀನುಗಾರಿಕೆ ಇನ್ನಿತರ ರೈತರು ಹಾಗೂ ಬೆಳೆಗಾರರಿಗೆ ರೈತ ಅಣ್ಣಪ್ಪ ನಾಯ್ಕ ಮಾದರಿಯಾಗಿದ್ದಾರೆ ಎಂದು ಹೇಳಿದರು.
ತಾಲೂಕು ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಮೀನುಗಾರಿಕೆಯಿಂದ ರೈತರಿಗೆ ಅನೂಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರದ ಮಹತ್ತರ ಯೋಜನೆ ಇದಾಗಿದ್ದು ರೈತರು, ಟೆಂಡರ್‌ದಾರರು ಹಾಗೂ ಆಸಕ್ತರು ತಮ್ಮ ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಇಲಾಖೆಯ ಮಾಹಿತಿ ಪಡೆದು ಪೂರಕ ವೃತ್ತಿ ಆರಂಭಿಸಬಹುದೆಂದು ಹೇಳಿದರು.ಮೀನುಗಾರಿಕಾ ಅಧಿಕಾರಿಗಳು, ರೈತರು, ಬೆಳೆಗಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಪೋಟೊ : ಅರಸೀಕೆರೆ ತಾಲೂಕಿನ ತಳಲೂರು ಕೆರೆಯ ಅಂಚಿನಲ್ಲಿ ಬೆಳೆದ ಮೀನು ಉತ್ಪಾದನಾ ಮರಿಗಳನ್ನು ಅಧಿಕಾರಿಗಳು ಕೆರೆಗೆ ಬಿಟ್ಟರು.