ಐವರು ಬಾಲ ಪ್ರತಿಭೆಗಳಿಗೆ ಪ್ರಮಾ ಪ್ರಶಸ್ತಿ 2025 ಪ್ರದಾನ

| Published : Nov 19 2025, 01:30 AM IST

ಸಾರಾಂಶ

ಮಕ್ಕಳ ದಿನಾಚರಣೆಯ ಪ್ರಯುಕ್ತ 16 ವರ್ಷದೊಳಗಿನ ಐದು ಬಾಲ ಪ್ರತಿಭೆಗಳಿಗೆ 12ನೇ ವರ್ಷದ ಪ್ರಮಾ ಪ್ರಶಸ್ತಿಯನ್ನು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯಲ್ಲಿ ಪ್ರದಾನ ಮಾಡಲಾಯಿತು.

ಉಡುಪಿ: ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ 16 ವರ್ಷದೊಳಗಿನ ಐದು ಬಾಲ ಪ್ರತಿಭೆಗಳಿಗೆ 12ನೇ ವರ್ಷದ ಪ್ರಮಾ ಪ್ರಶಸ್ತಿಯನ್ನು ಮಣಿಪಾಲದ ಮಣಿಪಾಲ್ ಡಾಟ್ ನೆಟ್ ಸಂಸ್ಥೆಯಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಗೆ ಆಯ್ಕೆಯಾದ ಶ್ರೀಶ ಭಟ್ ಕನ್ನರ್ಪಡಿ (ವೇದ), ಆದ್ಯ ಯು. (ತಬಲ), ಆಪ್ತ ಚಂದ್ರಮತಿ ಮುಳಿಯ (ವಿಜ್ಞಾನ), ಸ್ವಸ್ತಿ ಎಂ. ಭಟ್ (ಸಂಗೀತ), ಸುಶಾಂತ್ ಎಸ್. ಭಟ್ (ಯಕ್ಷಗಾನ) ಇವರಿಗೆ ಪ್ರಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಸದಾಶಿವ ರಾವ ಅವರು “ಮಕ್ಕಳಲ್ಲಿ ಹುದುಗಿರುವ ಪ್ರತಿಭೆ, ಹೆತ್ತವರ ಪ್ರೋತ್ಸಾಹ, ಶ್ರಮ ಮತ್ತು ಯೋಗ್ಯ ಗುರುಗಳ ಮಾರ್ಗದರ್ಶನವು ಅಂತರ್ಗತವಾದ ಪ್ರತಿಭೆ ಅರಳಲು ಅವಶ್ಯಕ. ಸಾಧನೆಯ ಹಾದಿಯಲ್ಲಿ ಸೋಲು ಬಂದಾಗ ಅದನ್ನು ಎದುರಿಸುವ ಬಗ್ಗೆ, ಸೋಲನ್ನು ಸಕರಾತ್ಮಕವಾಗಿ ಒಪ್ಪಿಕೊಳ್ಳುವ ಬಗ್ಗೆ ಹೆತ್ತವರ ಗುರುಗಳ ಹಾಗೂ ಹಿರಿಯರ ಮಾರ್ಗದರ್ಶನ ಅತೀ ಅಗತ್ಯ. ಪ್ರಶಸ್ತಿಗಳು ಸಾಧನೆಗೆ ಪ್ರೋತ್ಸಾಹದಾಯಕವಾಗಿದ್ದರೂ ಸಾಧನೆ ಮುಖ್ಯ ಗುರಿಯಾಗಬೇಕು. ಈ ಅಂಶ ಮಕ್ಕಳ ಮಾನಸಿಕ ಆರೋಗ್ಯದ ಪೂರ್ಣ ಬೆಳವಣಿಗೆಗೆ ಪೂರಕ ಎಂಬ ಕಿವಿ ಮಾತನ್ನು ಹೇಳಿದರು. ಟ್ರಸ್ಟ್‌ನ ಪರವಾಗಿ ಡಾ.ಅನುಸೂಯ ದೇವಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪಳ್ಳತ್ತಡ್ಕ ಕೇಶವ ಭಟ್ ಮೊಮ್ಮಗಳಾದ ಪ್ರಮಾಳ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್‌ನ ಅಧ್ಯಕ್ಷೆ ದೇವಕಿ ಕೆ. ಭಟ್, ವಿದುಷಿ ಪವನ ಬಿ. ಆಚಾರ್ ಉಪಸ್ಥಿತರಿದ್ದರು. ಡಾ.ಬಾಲಚಂದ್ರ ಆಚಾರ್ ವಂದಿಸಿದರು. ಕಾರ್ಯಕ್ರಮವನ್ನು ಸಂಹಿತ ಜಿಪಿ ನಿರ್ವಹಿಸಿದರು.

ಪ್ರಮಾ ಪ್ರಶಸ್ತಿ 2025ರ ಪುರಸ್ಕೃತರು ತಮ್ಮ ಪ್ರಾಯಕ್ಕೆ ಮೀರಿದ ಪ್ರದರ್ಶನವನ್ನು ನೀಡಿ ಸಭಿಕರಿಂದ ಮೆಚ್ಚುಗೆ ಪಡೆದರು.