ಹೋತನಹಳ್ಳಿಯಲ್ಲಿ ₹೧೦ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.

ಹಾನಗಲ್ಲ: ಬಡವರು, ಜನಸಾಮಾನ್ಯರ ಕಷ್ಟ ಅರಿತು, ಬೆಲೆ ಏರಿಕೆಯ ಬಿಸಿ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ₹೧೦ ಲಕ್ಷ ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡುತ್ತಿದ್ದ ಬಿಜೆಪಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಅವೇ ಯೋಜನೆಗಳನ್ನು ನಕಲು ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನಿಯಂತ್ರಿಸುವುದು ಒಂದೆಡೆ ಇರಲಿ, ಭಾರಿ ಪ್ರಮಾಣದಲ್ಲಿ ಏರಿಸಿ ಜನರನ್ನು ತೀವ್ರ ಸಮಸ್ಯೆಗೀಡು ಮಾಡಿದೆ. ಬಡಜನರ ಬದುಕಿಗೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದೇ ಮೊದಲ ಬಾರಿಗೆ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೂ ಮೂಲಭೂತ ಸೌಲಭ್ಯ ಹೆಚ್ಚಿಸುವ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಶಿವಾನಂದ ಕನ್ನಕ್ಕನವರ, ಶಿವಾನಂದ ಕಾಡಮ್ಮನವರ, ದಯಾನಂದ ಕನ್ನಕ್ಕನವರ, ಪ್ರಕಾಶಪ್ಪ ಲಕ್ಕೊಳ್ಳಿ, ಈರಪ್ಪ ಬೈಲವಾಲ ಸೇರಿದಂತೆ ಇನ್ನೂ ಹಲವರು ಇದ್ದರು.