ಸಾರಾಂಶ
ಶಿಗ್ಗಾವಿ: ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳೇ ನನ್ನ ಗೆಲುವಿಗೆ ಶ್ರೀ ರಕ್ಷೆ ಯಾಗಲಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳು ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಕೊಡುವ ವಿಶ್ವಾಸವಿದೆ ಎಂದು ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.
ಪಟ್ಟಣದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ. ಇದು ಬಿಜೆಪಿಗರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಹತಾಶ ಮನೋಭಾವನೆ ತೋರ್ಪಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದ್ದು, ಬಿಜೆಪಿಗರ ಮಾತಿಗೆ ಕಿವಿಕೊಡದೇ, ಕಾಂಗ್ರೆಸ್ ಪಕ್ಷಕ್ಕೆ ಮತಹಾಕುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶಕ್ತಿ ನೀಡುವಂತೆ ಮತದಾರ ಪ್ರಭುಗಳಲ್ಲಿ ಮನವಿ ಮಾಡಿದರು.ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷ ಹೆಚ್.ಎಂ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುತ್ತಾರೆ ಎಂದು ಬಿಜೆಪಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಬಂದ್ ಮಾಡುವ ಮಾತೇ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ, ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರು. ವಿದ್ಯಾವಂತ ಯುವಕ ಯುವತಿಯರಿಗೆ ವರ್ಷಕ್ಕೆ ೧ ಲಕ್ಷ ರು. ಅಂಗನವಾಡಿ ಶಿಕ್ಷಕಿಯರಿಗೆ ದುಪ್ಪಟ್ಟು ವೇತನ, ರೈತ ನ್ಯಾಯ ಯೋಜನೆಗಳು ಜಾರಿಗೆ ಬರಲಿದ್ದು, ಮತದಾರ ಪ್ರಭುಗಳು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮತದಾರರಲ್ಲಿ ಮನವಿ ಮಾಡಿದರು.
ಸೋಮಣ್ಣ ಬೇವಿನಮರದ, ಸಲೀಂ ಅಹಮ್ಮದ, ಯಾಸೀರಖಾನ ಪಠಾಣ, ಬಿ.ಸಿ .ಪಾಟೀಲ ಮಾತನಾಡಿದರು. ಮುಖಂಡರಾದ ಪ್ರೇಮಾ ಪಾಟೀಲ, ಶಂಭುಲಿಂಗಪ್ಪ ಆಜೂರ, ಮುನ್ನಾ ಗುಲ್ಮಿ, ಮಹಮ್ಮದ ತಹಮೀದ್ ಖಾಜಿ, ನೂರಹಮ್ಮದ ಡೊರಳ್ಳಿ, ಸಿ.ಆರ್. ದೇಸಾಯಿ, ಬಾಬರ್ ಬಾವೂಜಿ, ಸತೀಶ ಆಲದಕಟ್ಟಿ, ಮಂಜುನಾಥ ಮನ್ನಣ್ಣವರ, ಗದಿಗೆಪ್ಪ ಬಳ್ಳಾರಿ, ವೀರೇಶ ಆಜೂರ, ಫಕ್ಕೀರೇಶ ಹೊಳಲಮ್ಮನವರ ಸೇರಿದಂತೆ ಇತರರು ಇದ್ದರು.