ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲೆಯನ್ಸ್‌ ಕ್ಲಬ್‌ ಆರಂಭವಾಗಿ 16 ವರ್ಷಗಳಾಗಿದ್ದು, ಇದೇ ಮೊದಲ ಬಾರಿಗೆ ಮಕ್ಕಳಿಗೆ ಪರಿಸರ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯದ ಮೈಸೂರು, ಬೆಂಗಳೂರು, ಉಡುಪಿ, ಮಂಡ್ಯ ಸೇರಿದಂತೆ 5 ಜಿಲ್ಲೆಗಳು, ದೇಶದ 45 ಜಿಲ್ಲೆಗಳು ವಿಶ್ವದ 28 ದೇಶಗಳಲ್ಲಿ ಸ್ಪರ್ಧೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಸೋಸಿಯೇಷನ್‌ ಆಫ್‌ ಅಲೆಯನ್ಸ್‌ ಕ್ಲಬ್‌ ಇಂಟರ್‌ ನ್ಯಾಷನಲ್‌ ವತಿಯಿಂದ ಇಲ್ಲಿನ ವಿಜಯನಗರದ ಶ್ರೀ ಕಲಾನಿಕೇತನ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಅಲೆಯನ್ಸ್‌ ಗ್ರೀನ್‌ ಅವಾರ್ಡ್- ಅಂತಾರಾಷ್ಟ್ರೀಯ ಗ್ರೀನ್‌ ಪೋಸ್ಟರ್‌ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು ಐದು ನೂರು ಮಂದಿ ಪಾಲ್ಗೊಂಡಿದ್ದರು.

ಆಯೋಜಕರು ಒಂದು ನೂರು ಮಂದಿಯ ನಿರೀಕ್ಷೆಯಲ್ಲಿದ್ದರು. ಆದರೆ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬಂದು ಉತ್ಸಾಹದಿಂದ ಪಾಲ್ಗೊಂಡರು. ಹೀಗಾಗಿ ಶ್ರೀ ಕಲಾನಿಕೇತನ ಕಲಾ ಶಾಲೆಯ ಜೊತೆಗೆ ಪಕ್ಕದಲ್ಲಿರುವ ದಿವ್ಯರೂಪಾ ಕಲ್ಯಾಣ ಮಂಟಪದಲ್ಲಿಯೂ ವಿದ್ಯಾರ್ಥಿಗಳ ಚಿತ್ರರಚನೆಗೆ ಸ್ಥಳ ಮಾಡಿಕೊಡಬೇಕಾಗಿ ಬಂದಿತು.

ಅಲೆಯನ್ಸ್‌ ಕ್ಲಬ್‌ ಅಂತಾರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ ವಿ.ಬೈರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಮುಂದಿನ ಪೀಳಿಗೆಗೆ ಪರಿಶುದ್ಧ ವಾತಾವರಣ ಬಿಟ್ಟುಕೊಡಬೇಕೆ ಹೊರತು ಕಲುಷಿತ ವಾತಾವರಣವನ್ನಲ್ಲ. ಪೋಷಕರು ಮಕ್ಕಳಿಗೆ ಹಣ, ಆಸ್ತಿ, ಅಂತಸ್ತು ಒದಗಿಸುವುದಕ್ಕಿಂತ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲೆಯನ್ಸ್‌ ಕ್ಲಬ್‌ ಆರಂಭವಾಗಿ 16 ವರ್ಷಗಳಾಗಿದ್ದು, ಇದೇ ಮೊದಲ ಬಾರಿಗೆ ಮಕ್ಕಳಿಗೆ ಪರಿಸರ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯದ ಮೈಸೂರು, ಬೆಂಗಳೂರು, ಉಡುಪಿ, ಮಂಡ್ಯ ಸೇರಿದಂತೆ 5 ಜಿಲ್ಲೆಗಳು, ದೇಶದ 45 ಜಿಲ್ಲೆಗಳು ವಿಶ್ವದ 28 ದೇಶಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಸುಮಾರು 15 ಸಾವಿರ ಮಕ್ಕಳು ಭಾಗವಹಿಸುತ್ತಿದ್ದಾರೆ. ಗೆದ್ದವರಿಗೆ ಎರಡು ವಿಭಾಗಗಳಲ್ಲಿ ತಲಾ ಏಳು ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಇಲ್ಲಿ ವಿಜೇತರಾದವರನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಎಲ್ಲಿಯೇ ನಡೆದರೂ ಅಲೆಯನ್ಸ್‌ ಕ್ಲಬ್‌ ವತಿಯಿಂದಲೇ ಮಕ್ಕಳನ್ನು ಪೋಷಕರ ಜೊತೆ ಕಳುಹಿಸಿಕೊಡಲಾಗುವುದು ಎಂದರು.

ಅಲೆಯನ್ಸ್‌ ಕ್ಲಬ್‌ ಜಿಲ್ಲಾ ರಾಜ್ಯಪಾಲ ಮಹಾಬಲೇಶ್ವರ ಬೈರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಶ್ರೀ ಕಲಾನಿಕೇತನ ಸ್ಕೂಲ್‌ ಆಫ್‌ ಆರ್ಟ್ಸ್‌ ಕಾರ್ಯದರ್ಶಿ ಬಾಬುರಾವ್‌, ಶ್ರೀ ಕಲಾನಿಕೇತನ ದೃಶ್ಯಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ. ಅಲೆಯನ್ಸ್‌ ಕ್ಲಬ್‌ ಜಿಲ್ಲಾ ಮಾಜಿ ರಾಜ್ಯಪಾಲರಾಜ ಸಿರಿ ಬಾಲು, ಎಸ್‌. ವೆಂಕಟೇಶ್‌, ಉಪ ರಾಜ್ಯಪಾಲರಾದ ನ.ಗಂಗಾಧರಪ್ಪ, ಶಾಲಿನಿ ಬೈರಿ ಮುಖ್ಯಅತಿಥಿಗಳಾಗಿದ್ದರು. ಸ್ಪರ್ಧೆಯ ಮುಖ್ಯ ಸಂಚಾಲಕ ಸಿ. ಚಿಕ್ಕಣ್ಣ ಸ್ವಾಗತಿಸಿದರು. ಸಂಯೋಜಕಿ ಶ್ವೇತಾ ದಿನೇಶ್‌, ಇಂದಿರಾ ವೆಂಕಟೇಶ್‌, ಶೋಭಾ ಸಿರಿಬಾಲು, ಹರವು ಲೋಕೇಶ್‌, ಎನ್‌. ಬೆಟ್ಟೇಗೌಡ, ಶ್ರೀಧರ್‌ ಇದ್ದರು. ವಿಠಲ್‌ ಝಳಕಿ, ಕೆ. ಪರಮೇಶ್ವರ್‌ ತೀರ್ಪುಗಾರರಾಗಿದ್ದರು.

ನಂತರ ನಡೆದ ಸಮಾರೋಪದಲ್ಲಿ ವಿಜೇತರಿಗೆ ಕ್ರಮವಾಗಿ ಐದು, ಮೂರು, ಎರಡು, ಒಂದು ಸಾವಿರ ರು.ಗಳ ಮೊದಲ ನಾಲ್ಕು ಬಹುಮಾನ, ಐದು ನೂರು ರೂ.ಗಳ ನಾಲ್ಕು ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.