ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಪಿ.ಲಂಕೇಶ್ ಹೆಸರಿನಲ್ಲಿ ಗೋಪಾಲ್ ಯಡಗೆರೆ ಸೇರಿ ಐವರು ಪತ್ರಕರ್ತರಿಗೆ ಪ್ರಶಸ್ತಿ

| N/A | Published : Apr 11 2025, 12:35 AM IST / Updated: Apr 11 2025, 01:21 PM IST

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಪಿ.ಲಂಕೇಶ್ ಹೆಸರಿನಲ್ಲಿ ಗೋಪಾಲ್ ಯಡಗೆರೆ ಸೇರಿ ಐವರು ಪತ್ರಕರ್ತರಿಗೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

 ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಪಿ.ಲಂಕೇಶ್ ಹೆಸರಿನಲ್ಲಿ ಸ್ಥಾಪಿಸಿರುವ ಜೀವಮಾನದ ಸಾಧನೆಗಾಗಿ ನೀಡುವ ವಾರ್ಷಿಕ ಪ್ರಶಸ್ತಿ ಹಾಗೂ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗಾರ ಗೋಪಾಲ್ ಯಡಗೆರೆ ಸೇರಿದಂತೆ 5 ಮಂದಿಗೆ ಪ್ರಶಸ್ತಿ ಘೋಷಿಸಿದೆ.

ಶಿವಮೊಗ್ಗ: ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಪಿ.ಲಂಕೇಶ್ ಹೆಸರಿನಲ್ಲಿ ಸ್ಥಾಪಿಸಿರುವ ಜೀವಮಾನದ ಸಾಧನೆಗಾಗಿ ನೀಡುವ ವಾರ್ಷಿಕ ಪ್ರಶಸ್ತಿ ಹಾಗೂ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗಾರ ಗೋಪಾಲ್ ಯಡಗೆರೆ ಸೇರಿದಂತೆ 5 ಮಂದಿಗೆ ಪ್ರಶಸ್ತಿ ಘೋಷಿಸಿದೆ.

ಪಿ.ಲಂಕೇಶ್ ಹೆಸರಿನಲ್ಲಿ ಜೀವಮಾನ ಸಾಧನೆಗಾಗಿ ನೀಡುವ ಪ್ರಶಸ್ತಿಗಳನ್ನು 2022ನೇ ಸಾಲಿನಲ್ಲಿ ಕನ್ನಡಪ್ರಭ ಪತ್ರಿಕೆಯ ಗೋಪಾಲ್ ಯಡಗೆರೆ, 23ನೇ ಸಾಲಿನಲ್ಲಿ ಎಸ್.ಚಂದ್ರಕಾಂತ್ ಮತ್ತು 24ನೇ ಸಾಲಿನ ಪ್ರಶಸ್ತಿಯನ್ನು ಕೆ.ತಿಮ್ಮಪ್ಪ ಅವರಿಗೆ ಪ್ರಕಟಿಸಲಾಗಿದೆ. ಕ್ರಿಯಾಶೀಲ ಪ್ರಶಸ್ತಿಯನ್ನು 23ನೇ ಸಾಲಿಗೆ ಶಿವಾನಂದ ಕರ್ಕಿ, 24ನೇ ಸಾಲಿಗೆ ಕನ್ನಡಪ್ರಭ ಪತ್ರಿಕೆಯ ಸೊರಬ ವರದಿಗಾರ ಎಚ್.ಕೆ.ಬಿ.ಸ್ವಾಮಿ ಅವರಿಗೆ ಪ್ರಕಟಿಸಲಾಗಿದೆ.

ಪ್ರಶಸ್ತಿಗಳನ್ನು ಏ.14 ರಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು. ಬಿ.ಎಲ್.ಶಂಕರ್ ಮತ್ತು ಹಿರಿಯ ಸಾಹಿತಿ ನಾಡೋಜ ಕುಂ.ವೀರಭದ್ರಪ್ಪ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರೆಸ್‌ ಟ್ರಸ್ಟ್ ಪತ್ರಕರ್ತರ ಕಲ್ಯಾಣಕ್ಕಾಗಿಯೇ ಶ್ರಮಿಸುತ್ತಿರುವ ಸಂಸ್ಥೆಯಾಗಿದ್ದು, ಪತ್ರಕರ್ತರ ಸೇವೆಗಳನ್ನು ಗುರುತಿಸಿ ಪಿ.ಲಂಕೇಶ್ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಮೂರು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ನೀಡಲಾಗುತ್ತಿದೆ. ಕೊರೋನಾ ಬಂದಿದ್ದರಿಂದ ಎರಡು ವರ್ಷದ ಪ್ರಶಸ್ತಿಗಳನ್ನ ತಡೆಹಿಡಿಯಲಾಗಿತ್ತು. ಈಗ ಈ ಪ್ರಶಸ್ತಿಗಳ ಜೊತೆಗೆ ಇಬ್ಬರು ಕ್ರಿಯಾಶೀಲ ಪತ್ರಕರ್ತರನ್ನು ಸೇರಿಕೊಂಡಂತೆ ಐವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

 ಜೀವಮಾನ ಸಾಧನೆಯ ಪ್ರಶಸ್ತಿ 20 ಸಾವಿರ ರು. ನಗದು ಹಾಗೂ ಫಲಕ ಮತ್ತು ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಯು 10 ಸಾವಿರ ರು.. ನಗದು ಹಾಗೂ ಫಲಕ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.ಹಿರಿಯ ಸಾಹಿತಿ, ಚಿಂತಕ ನಾಡೋಜ ಕುಂ.ವೀರಭದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ಇದರ ಅಧ್ಯಕ್ಷ ಬಿ.ಎಲ್.ಶಂಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮತ್ತು ಟ್ರಸ್ಟ್ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ವಿವರಿಸಿದರು.

ಪ್ರೆಸ್‌ಟ್ರಸ್ಟ್ ಪಾಲಿಗೆ ಇದೊಂದು ಸಂತಸದ ಕ್ಷಣವಾಗಿದೆ. ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವಲ್ಲಿ ಹಲವು ಸಂಘಟನೆಗಳು ವಿಫಲವಾಗಿವೆ. ಈ ಪ್ರಶಸ್ತಿ ನೀಡಲು ನಾವು ಯಾವ ಅರ್ಜಿಯನ್ನು ಕರೆದಿಲ್ಲ. ನಾವೇ ಗುರುತಿಸಿದ್ದೇವೆ. ಇನ್ನು ಮುಂದೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತದೆ. ನಾನು ಗತಿಸಿದ ನಂತರವೂ ಈ ಪ್ರಶಸ್ತಿ ಉಳಿಯಬೇಕು ಮತ್ತು ಪ್ರೆಸ್‌ಟ್ರಸ್ಟ್ ಪ್ರಶಸ್ತಿ ನನಗೂ ಸಿಗಬೇಕು ಎಂಬ ಹಂಬಲ ಪತ್ರಕರ್ತರದ್ದಾಗಬೇಕು ಎಂದು ಹೇಳಿದರು.ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಪ್ರೆಸ್ ಟ್ರಸ್ಟ್ ಎಲ್ಲಾ ಕಾರ್ಯಕ್ರಮಗಳನ್ನು ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿಯೇ ಮಾಡುತ್ತಾ ಬಂದಿದೆ. ಪತ್ರಕರ್ತರಿಗಾಗಿಯೇ ದುಡಿಯುವ ಸಂಸ್ಥೆ ಇದು.

 ಕಷ್ಟದಲ್ಲಿರುವ, ಅನಾರೋಗ್ಯದಿಂದ ಬಳಲುತ್ತಿದ್ದ ಅನೇಕ ಪತ್ರಕರ್ತರಿಗೆ ನೆರವು ಕೂಡ ನಾವು ನೀಡಿದ್ದೇವೆ. ಇದರ ಮುಂದುವರೆದ ಭಾಗವಾಗಿ ಪತ್ರಕರ್ತರ ಜೀವಮಾನ ಸಾಧನೆ ಗುರುತಿಸಿ, ಕ್ರಿಯಾಶೀಲತೆ ಬೆಂಬಲಿಸುವ ದೃಷ್ಟಿಯಿಂದ ಪ್ರೆಸ್ ಟ್ರಸ್ಟ್ ಈ ಪ್ರಶಸ್ತಿ ನೀಡುವ ಉದ್ದೇಶ ಹೊಂದಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ.ಜೇಸುದಾಸ್, ಸಂತೋಷ್ ಕಾಚನಕಟ್ಟೆ, ಮೋಹನಕೃಷ್ಣ, ಕಿರಣ್ ಕಂಕಾರಿ, ಗಜೇಂದ್ರಸ್ವಾಮಿ, ಗುಣಾರಿ, ಪಿ.ಸಿ.ನಾಗರಾಜ್, ಪ್ರಸನ್ನ, ಹೊನ್ನಾಳಿ ಚಂದ್ರಶೇಖರ್ ಇದ್ದರು.