ಮಹಿಳಾ ಪೂರಕ ಪೌಷ್ಟಿಕ ಕೇಂದ್ರದ ಐದು ಮಂದಿ ಅಮಾನತು

| Published : Oct 23 2024, 12:42 AM IST

ಸಾರಾಂಶ

ಕೇಂದ್ರದ ಕಲಾ, ಸುಧಾ, ಕಾವ್ಯ, ಅಂಬಿಕಾ ಮತ್ತು ನಯನ ಅಮಾನತಿಗೆ ಒಳಗಾದವರು. ಆಹಾರ ನಿಗಮದ ಅಧ್ಯಕ್ಷರು ಮತ್ತು ಸದಸ್ಯರು ಪರಿಶೀಲನೆಗೆಂದು ಮಂಗಳವಾರ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ಸಿಬ್ಬಂದಿಯಲ್ಲಿ ಎರಡು ಗುಂಪುಗಳಾಗಿ ಕಾರ್ಯನಿರ್ವಹಿಸುತ್ತಿರುವುದು. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವುದು ಕಂಡುಬಂದಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹಳೇಬೂದನೂರು ಗ್ರಾಮದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರದ ಐವರು ಸಿಬ್ಬಂದಿಯನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅಮಾನತುಗೊಳಿಸಿ ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ.

ಕೇಂದ್ರದ ಕಲಾ, ಸುಧಾ, ಕಾವ್ಯ, ಅಂಬಿಕಾ ಮತ್ತು ನಯನ ಅಮಾನತಿಗೆ ಒಳಗಾದವರು. ಆಹಾರ ನಿಗಮದ ಅಧ್ಯಕ್ಷರು ಮತ್ತು ಸದಸ್ಯರು ಪರಿಶೀಲನೆಗೆಂದು ಮಂಗಳವಾರ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ಸಿಬ್ಬಂದಿಯಲ್ಲಿ ಎರಡು ಗುಂಪುಗಳಾಗಿ ಕಾರ್ಯನಿರ್ವಹಿಸುತ್ತಿರುವುದು. ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವುದು ಕಂಡುಬಂದಿತು. ಶಿಶು ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಸುಮಾರು ೨೨ ಬಾರಿ ಕೇಂದ್ರಕ್ಕೆ ಭೇಟಿ ನೀಡಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದರು ಎಂದು ಡಾ.ಎಚ್.ಕೃಷ್ಣ ವಿವರಿಸಿದರು.

ಕೇಂದ್ರದಲ್ಲಿ ಎಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಷ್ಟು ಮಂದಿ ಬಂದಿದ್ದಾರೆ, ಎಷ್ಟು ಜನ ಬಂದಿಲ್ಲ ಎಂಬ ಬಗ್ಗೆ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ. ಎಂಎಸ್‌ಪಿಎಸ್‌ನವರೇ ಅಂಗನವಾಡಿಗಳಿಗೆ ನೀಡಲಾಗುವ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ನೀಡಬೇಕು. ಆದರೆ, ಯಂತ್ರ ಕೆಟ್ಟು ನಿಂತಿದೆ ಎಂದು ಹೇಳುತ್ತಿದ್ದಾರೆ. ಕೇವಲ ಪ್ಯಾಕಿಂಗ್ ಮಾಡುವುದಕ್ಕೆ ಇಷ್ಟೊಂದು ಜನರ ಅಗತ್ಯವಿಇಲ್ಲ ಎಂದು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದರು.

ಸಿಬ್ಬಂದಿ ಗುಂಪುಗಾರಿಕೆಯನ್ನು ದೂರವಿಟ್ಟು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಅಲ್ಲಿಯವರೆಗೆ ಸಿಬ್ಬಂದಿ ಕೆಲಸಕ್ಕೆ ಬರುವುದು ಬೇಡ. ಅವರು ಒಗ್ಗಟ್ಟಿನಿಂದ ಕರ್ತವ್ಯನಿರ್ವಹಿಸುವ ಮನಸ್ಥಿತಿಗೆ ಬಂದಾಗ ಅವರನ್ನು ಕೆಲಸದಲ್ಲಿ ಮುಂದುವರೆಸುವಂತೆ ಸಿಡಿಪಿಓಗೆ ಸೂಚಿಸಿದರು.

ಮಿಮ್ಸ್ ಆಸ್ಪತ್ರೆಯಲ್ಲಿ ಆಹಾರ ಗುಣಮಟ್ಟ ಸರಿಯಿಲ್ಲ:

ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಸಮರ್ಪಕವಾಗಿಲ್ಲ. ಈ ಸಂಬಂಧ ಆಹಾರ ಪೂರೈಸುವವರಿಗೆ ನೋಟಿಸ್ ನೀಡಿದ್ದೇನೆ. ಆಸ್ಪತ್ರೆಯಲ್ಲಿ ೨೧೬ ರೋಗಿಗಳು ದಾಖಲಿದ್ದು, ಕಳಪೆ ಗುಣಮಟ್ಟದ ಬ್ರೆಡ್, ಅನ-ಸಾಂಬಾರ್, ನೀರು ಹಾಲು ನೀಡುತ್ತಿರುವುದನ್ನು ಕಂಡು ದಂಗಾದರು.

ಇಂತಹ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿರುವುದು ಬೇಸರ ಉಂಟುಮಾಡಿದೆ. ಎಷ್ಟೋ ರೋಗಿಗಳಿಗೆ ಉಚಿತವಾಗಿ ಊಟ ನೀಡುತ್ತಾರೆಂಬ ವಿಷಯವೇ ಗೊತ್ತಿಲ್ಲ. ಜೊತೆಗೆ ರೋಗಿಗಳಿಗೆ ಅಗತ್ಯವಿರುವಷ್ಟು ಬ್ರೆಡ್, ಅನ್ನ, ಸಾಂಬಾರ್ ಮತ್ತು ಹಾಲು ಕೂಡ ಸರಬರಾಜಾಗುತ್ತಿಲ್ಲ. ಆಹಾರದಲ್ಲಿ ರುಚಿಯೂ ಇಲ್ಲ ಎಂದು ಡಾ.ಕೃಷ್ಣ ತಿಳಿಸಿದರು. ಇದೇ ವೇಳೆ ರೋಗಿಗಳು ಮತ್ತು ಸಂಬಂಧಿಕರು ತಮ್ಮ ನೋವನ್ನು ಅಧ್ಯಕ್ಷರ ಬಳಿ ವ್ಯಕ್ತಪಡಿಸಿದರು.

ಆಹಾರ ಆಯೋಗದ ಸಮಿತಿಯಲ್ಲಿ ರೋಹಿಣಿ ಪ್ರಿಯ, ಸುಮಂತರಾವ್, ಲಿಂಗರಾಜುಕೋಟೆ, ಮಾರುತಿ ದೊಡ್ಡಣ್ಣನವರ್, ವಿಜಯಲಕ್ಷ್ಮೀ ಇದ್ದರು.