ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದ ಅನನ್ಯ ಸಂಸ್ಥೆಯಲ್ಲಿ ನಮ್ಮ ದೇಶಿ ವಿದ್ಯಾಸಂಸ್ಥೆಯ ಐದು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಜು.15 ರಿಂದ ಆರಂಭಿಸಲಾಗುವುದು ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದ ವತಿಯಿಂದ ನೀಡಲಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿಶ್ವವಿದ್ಯಾಲಯದಿಂದ ಐದನೇ ಸಂಗೀತ ಶಾಸ್ತ್ರಕ್ಕೆ ಮಾನ್ಯತೆ ಸಿಕ್ಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಗೀತ ಸರ್ಟಿಫಿಕೇಟ್ ಕೋರ್ಸ್, ಹಿಂದೂಸ್ತಾನಿ ಸಂಗೀತ ಸರ್ಟಿಫಿಕೇಟ್ ಕೋರ್ಸ್, ಐದನೇ ಸಂಗೀತ ಶಾಸ್ತ್ರ ಸರ್ಟಿಫಿಕೇಟ್ ಕೋರ್ಸ್, ಸುಗಮ ಸಂಗೀತ ಸರ್ಟಿಫಿಕೇಟ್ ಕೋರ್ಸ್ ಹಾಗೂ ಸಿನಿಮಾ ಸಂಗೀತದ ಸರ್ಟಿಫಿಕೇಟ್ ಕೋರ್ಸ್ ಎಂಬ ಐದು ಸರ್ಟಿಫಿಕೇಟ್ ಕೋರ್ಸ್‌ಗಳ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.
ಸಂಗೀತ ತರಗತಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ಮಂಡ್ಯ ಜನರ ಋಣಭಾರವನ್ನು ತೀರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದೇನೆ ಎಂದು ನುಡಿದರು.ಇದರ ಜೊತೆಗೆ ಕರ್ನಾಟಕ ಸಂಘದ ಕಚೇರಿಯಲ್ಲಿ ಶಿಸ್ತು ಇದೆ. ಅಲ್ಲೊಂದು ಸಭಾ ಭವನ ನಿರ್ಮಾಣ ಮಾಡುತ್ತಿರುವುದರಿಂದ ನಾನು ಒಂದು ಸಂಗೀತ ಕಾರ್ಯಕ್ರಮವನ್ನು ನನ್ನ ಖರ್ಚಿನಲ್ಲಿಯೇ ಮಾಡಿಕೊಡುತ್ತೇನೆ. ಅದರಿಂದ ಬರುವ ಹಣವನ್ನು ಭವನ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಈ ಸಮಯದಲ್ಲಿ ದನಿಗೂಡಿಸಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸ್ಥಳೀಯ ಶಾಸಕರು ಮತ್ತು ನಾವೂ ಈ ಕಾರ್ಯಕ್ರಮಕ್ಕೆ ಕೈಜೋಡಿಸಿ ಜಿಲ್ಲಾ ಕ್ರೀಡಾಂಗಣದಲ್ಲೇ ಅದ್ಧೂರಿಯಾಗಿ ನಡೆಸೋಣ. ಅದರ ಖರ್ಚನ್ನು ನಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಹಂಸಲೇಖ ಹರ್ಷ ವ್ಯಕ್ತಪಡಿಸಿದರು.ಕಲಾವಿದರು ಸಿಟ್ಟು, ದ್ವೇಷ ಸಿನಿಮಾದಲ್ಲಷ್ಟೇ ಸೀಮಿತವಾಗಿರಲಿ:
ಕಲಾವಿದರು ಸಿನಿಮಾದಲ್ಲಷ್ಟೇ ಸಿಟ್ಟನ್ನು ಸ್ಕ್ರಿಪ್ಟ್ ಮಾಡಿ, ಧ್ವೇಷವನ್ನು ಕ್ಯಾರೆಕ್ಟರ್ ಮಾಡಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು. ಚಿತ್ರನಟ ದರ್ಶನ್ ಪ್ರಕರಣದ ಸಂಬಂಧ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಿಜ ಜೀವನದಲ್ಲಿ ಸ್ಕ್ರಿಪ್ಟನ್ನು ತರಬಾರದು. ಕ್ಯಾರೆಕ್ಟರ್ ಆಗಬಾರದು. ಈ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ಇದು ಕಲಾವಿದರ ಕರ್ತವ್ಯ ಎಂದರು.ದರ್ಶನ್ ನನ್ನ ಮಗು ಅಂತಾ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನೋವನ್ನು ನಾನು ತಿಂತಿದ್ದೀನಿ. ಆ ಮಗು ಕೂಡ ಅಷ್ಟೇ ನೋವು ತಿಂತಿದೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ಗಮನ ಕೊಡೋಣ. ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಗೆ ಬೀಳೋದು ಬೇಡ ಎಂದು ಹೇಳಿದರು.
ದರ್ಶನ್ ಪ್ರಕರಣದಿಂದ ಸ್ಯಾಂಡಲ್ ವುಡ್ ಗೆ ಕಳಂಕ ವಿಚಾರವಾಗಿ ಮಾತನಾಡಿ, ಕೇರಳ ಚಿತ್ರೋದ್ಯಮ ಹೀಗೇ ಆಗಿತ್ತು. ಅದೀಗ ಉತ್ತುಂಗದಲ್ಲಿದೆ. ಕೆಳಗೆ ಬಿದ್ದು ಮತ್ತೆ ಮೇಲೆ ಎದ್ದಿದೆ. ನಮ್ಮದು ಚಂದನವನ ಕಣಯ್ಯ. ಒಂದು ಮಳೆಗೆ ಮರ ಒಣಗಿದರೇನಂತೆ.ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತೆದೆ ಎಂದು ತಿಳಿಸಿದರು.