ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ

| Published : Sep 30 2025, 12:00 AM IST

ಸಾರಾಂಶ

2023- 24ನೇ ಸಾಲಿನ ಉಪ ಉತ್ಪನ್ನಗಳ ಲಾಭಾಂಶ ಹಂಚಿಕೆ ಮಾಡಬೇಕು. ಸಕ್ಕರೆ ಇಳುವರಿಯಲ್ಲಿ ಕಡಿಮೆ ತೋರುತಿದ್ದು, ಜಿಲ್ಲಾಡಳಿತ ಅಧಿಕಾರಿಗಳ ತಂಡ ರಚನೆ ಮಾಡಿ ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದವರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರ ಬೆಲೆ ನಿಗದಿ ಮಾಡಿರುವ ಎಫ್ಆರ್‌ ಪಿ ಪರಿಶೀಲಿಸಿ ರಾಜ್ಯ ಸರ್ಕಾರದ ಸಲಹಾ ಬೆಲೆ ಕಾಯ್ದೆಯಡಿ ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ಪ್ರತಿ ಟನ್ ಕಬ್ಬಿಗೆ 4000 ರೂ. ನಿಗದಿ ಮಾಡಬೇಕು. ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಸಬೇಕು. 2023- 24ನೇ ಸಾಲಿನ ಉಪ ಉತ್ಪನ್ನಗಳ ಲಾಭಾಂಶ ಹಂಚಿಕೆ ಮಾಡಬೇಕು. ಸಕ್ಕರೆ ಇಳುವರಿಯಲ್ಲಿ ಕಡಿಮೆ ತೋರುತಿದ್ದು, ಜಿಲ್ಲಾಡಳಿತ ಅಧಿಕಾರಿಗಳ ತಂಡ ರಚನೆ ಮಾಡಿ ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು. ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ ಭಾಗಗಳಲ್ಲಿ ಅತೀ ಹೆಚ್ಚು ತಂಬಾಕು ಬೆಳೆಗಳನ್ನೇ ನಂಬಿದ್ದಾರೆ. ತಂಬಾಕು ಬೆಲೆ ಕುಸಿತವಾದ್ದರಿಂದ ತಂಬಾಕು ಮಂಡಳಿ ಹಾಗೂ ಜಿಲ್ಲಾಡಳಿತ ಸ್ಥಳೀಯ ಸಂಸದರೊಂದಿಗೆ ಸಭೆ ನಡೆಸಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.ಮೈಸೂರು- ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಮಾನವ- ಪ್ರಾಣಿ ಸಂಘರ್ಷ ಹೆಚ್ಚಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು. ಅಸಹಜ ಕಾಡು ಪ್ರಾಣಿ ಸಾವನ್ನಪ್ಪಿದರೆ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು. ಪ್ರಾಣಿ ಸಂಘರ್ಷದಿಂದ ರೈತ ಸಾವನ್ನಪ್ಪಿದರೆ ಭಿಕ್ಷೆ ರೂಪದಲ್ಲಿ ಕೊಡುತ್ತಿರುವ ಪರಹಾರವನ್ನು ರಾಜ್ಯ ಸರ್ಕಾರ ಹೆಚ್ಚಿಸಬೇಕು. ನಂಜನಗೂಡು ತಾಲೂಕು ಏತ ನೀರಾವರಿ ವಿಳಂಭವಾಗಿದ್ದು, ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಅವರು ಒತ್ತಾಯಿಸಿದರು.ಭತ್ತ ಕಟಾವಿಗೆ ಮುಂಚಿತವಾಗಿ ಖರೀದಿ ಕೇಂದ್ರ ತೆಗೆದು ಎಂಸ್‌ ಪಿ ಬೆಲೆಗಿಂತ ಹೆಚ್ಚುವರಿವಾಗಿ 500 ರೂ. ಸಹಾಯ ಧನ ನೀಡಬೇಕು. ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಬಾಳೆ ಬೆಳೆದಿದ್ದು, ದರ ಕುಸಿತವಾದ್ದರಿಂದ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಎಪಿಎಂಸಿಗಳಲ್ಲಿ ಹೊರ ರಾಜ್ಯದ ಬಾಳೆ ಖರೀದಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ, ಮುಖಂಡರಾದ ಮಹೇಶ್, ಸ್ವಾಮಿರಾಜ್, ಕುಮಾರ್, ಅಂಕನಹಳ್ಳಿ ತಿಮ್ಮಪ್ಪ, ಸಿದ್ದ, ರವಿ. ಶೋಭಾ, ಗುರುಮಲ್ಲಪ್ಪ, ಚಿಕ್ಕಸ್ವಾಮಿ, ಮಹದೇವಸ್ವಾಮಿ ಮೊದಲಾದವರು ಇದ್ದರು.