ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಉದ್ದೇಶಪೂರ್ವಕವಾಗಿ ಪುತ್ಥಳಿಯ ಅಕ್ಕ-ಪಕ್ಕದಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಅವುಗಳನ್ನು ತೆರವುಗೊಳಿಸುವ ಮೂಲಕ ವೃತ್ತದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿ ಛತ್ರಪತಿ ಶಿವಾಜಿ ಮಹಾರಾಜ ಅಭಿಮಾನಿ ಬಳಗ ಮತ್ತು ಸಾರ್ವಜನಿಕರು ಶಾಸಕ ವಿಶ್ವಾಸ ವೈದ್ಯರವರಿಗೆ ಮನವಿ ಸಲ್ಲಿಸಿದರು.ಪಟ್ಟಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಅಕ್ಕ-ಪಕ್ಕದಲ್ಲಿ ಅನಾವಶ್ಯಕವಾಗಿ ಅಡಚಣೆಗಳಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಮೂಲಕ ಹಿಂದವೀ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ವಿಶೇಷ ಮೆರಗು ನೀಡಬೇಕು ಎಂದು ಮನವಿ ಮಾಡಿದರು.ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಗೋಡೆಗೆ ತಾಗುವಂತೆ ಅನಾವಶ್ಯಕವಾಗಿ ತಗಡಿನ ಶೆಡ್ಡುಗಳನ್ನು ನಿರ್ಮಾಣ ಮಾಡಿರುವುದು ಖಂಡನಾರ್ಹ ವಿಷಯವಾಗಿದ್ದು, ಇದರಿಂದ ಶಿವಾಜಿ ಮಹಾರಾಜರ ಪುತ್ಥಳಿಗೆ ಅವಮಾನವಾಗುತ್ತಿದೆ. ಕೂಡಲೇ ಶಿವಾಜಿ ಮಹಾರಾಜರ ವರ್ತುಳದ ಸೌಂದರ್ಯಕ್ಕೆ ಆಗುತ್ತಿರುವ ಅಡಚಣೆಯನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.ಶಾಸಕ ವಿಶ್ವಾಸ ವೈದ್ಯ ಮನವಿ ಸ್ವೀಕರಿಸಿ ಮಾತನಾಡಿ, ಶಿವಾಜಿ ಮಹಾರಾಜರ ವರ್ತುಳದ ಪಕ್ಕದಲ್ಲಿ ಇರುವಂತ ಅಡಚಣೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದರ ಜತೆಗೆ ಹೆಚ್ಚಿನ ಅನುದಾನದೊಂದಿಗೆ ವರ್ತುಳವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ ಮಾತನಾಡಿ, ಪಟ್ಟಣದಲ್ಲಿರುವ ಎಲ್ಲ ಮಹಾತ್ಮರ ಪುತ್ಥಳಿಗಳಿಗೆ ಆಗುತ್ತಿರುವ ಅವಮಾನಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಅಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಕೋರಿದರು.
ಲೋಕೋಪಯೋಗಿ ಇಲಾಖೆಯಡಿ ಈ ಭಾಗದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಶಿವಾಜಿ ಮಹಾರಾಜರ ವರ್ತುಳದ ಸೌಂದರ್ಯಕ್ಕೆ ಸರಿ ಹೊಂದುವಂತೆ ಅಕ್ಕ-ಪಕ್ಕದ ಅವ್ಯವಸ್ಥೆಗಳನ್ನು ತೆರವುಗೊಳಿಸಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದರು.ಛತ್ರಪತಿ ಶಿವಾಜಿ ಮಹಾರಾಜರ ವೃತ್ತದ ಬಳಿ ಇರುವಂತ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಶಾಸಕ ವಿಶ್ವಾಸ ವೈದ್ಯರವರಿಗೆ ಹಾಗೂ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮತ್ತು ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪುರಸಭೆ ಸದಸ್ಯ ಅರ್ಜುನ ಅಮ್ಮೋಜಿ, ಅಲ್ಲಮಪ್ರಭು ಪ್ರಭುನವರ, ಬಸವರಾಜ ಅರಮನಿ, ಸುನೀಲ ತಾರಿಹಾಳ, ಮಂಜು ಪಾಚಂಗಿ, ಅಂದುಸಿಂಗ್ ರಜಪುತ, ಪುಂಡಲೀಕ ಭೀ.ಬಾಳೋಜಿ, ವಿ.ಜೆ.ಪವಾರ, ಎಫ್.ವೈ.ಗಾಜಿ, ತಾನಾಜಿ ಶಿಂಧೆ, ರವಿ ಗಿರಿಜನ್ನವರ, ಲಕ್ಷ್ಮಣ ಕಿಟದಾಳ, ಶಿವಾನಂದ ತಾರೀಹಾಳ, ಅಣ್ಣಪ್ಪ ಪವಾರ, ಮಲ್ಲೇಶ ರಾಜನಾಳ, ಕೇದಾರ ಮೊಕಾಶಿ, ಸಿದ್ದಪ್ಪ ರಾಹುತ, ಮಾರುತಿ ಜಾಧವ, ಎಫ್.ಎ.ಕರೀಕಟ್ಟಿ, ಶಿವಾನಂದ ಹೂಲಿಕಟ್ಟಿ, ವಿಠ್ಠಲ ಜಾಮದಾರ ಹಾಗೂ ಸಾರ್ವಜನಿಕರು ಮತ್ತು ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಶಿವಾಜಿ ಮಹಾರಾಜರ ವರ್ತುಳದ ಪಕ್ಕದಲ್ಲಿ ಇರುವಂತ ಅಡಚಣೆಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದರ ಜತೆಗೆ ಹೆಚ್ಚಿನ ಅನುದಾನದೊಂದಿಗೆ ವರ್ತುಳವನ್ನು ಅಭಿವೃದ್ಧಿಪಡಿಸುವೆ.-ವಿಶ್ವಾಸ ವೈದ್ಯ,
ಶಾಸಕ.