ಪ್ರತಿ ಟನ್ ಕಬ್ಬಿಗೆ 4700 ದರ ನಿಗದಿಗೊಳಿಸಿ

| Published : Oct 06 2025, 01:01 AM IST

ಸಾರಾಂಶ

ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪ್ರತಿ ಟನ್ ಕಬ್ಬಿಗೆ ₹4700 ದರ ನಿಗದಿ ಮಾಡಬೇಕು ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ನಡುರಸ್ತೆಯಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಧರಣಿ ನಡೆಸಿದರು.

ಎಪಿಎಂಸಿ ಮೂಲಕ ಕಬ್ಬು ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಸುವುದು, ಕಬ್ಬು ತೆರಿಗೆ ಆಕರಣೆಯಲ್ಲಿ ರೈತರಿಗೆ ₹2000 ಹೆಚ್ಚುವರಿ ಹಣ, ಅತಿವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ₹40 ಸಾವಿರ ಪರಿಹಾರ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡವುದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಾತಿ, ಕೃಷಿಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ ಹಾಗೂ ಕೃಷಿ ಚಟುವಟಿಕೆಗಳಿಗೂ ಉದ್ಯೋಗ ಖಾತ್ರಿ ಯೋಜನೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.ಕೆರೆ ತುಂಬುವ ಮತ್ತು ಹೂಳೆತ್ತುವ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು. ರೈತರಿಗೆ ದಿನದ 12 ಗಂಟೆಯವರೆಗೆ ವಿದ್ಯುತ್ ಪೂರೈಕೆ ಮತ್ತು ರಾತ್ರಿ ನಿರಂತರವಾಗಿ ಸಿಂಗಲ್ ಫೇಸ್ ವಿದ್ಯುತ್ ಒದಗಿಸಬೇಕು. 40 ವರ್ಷಗಳ ಹಿಂದಿನ ಹಳೆಯ ವಿದ್ಯುತ್ ತಂತಿಗಳ ಬದಲಾವಣೆ, ಅವೈಜ್ಞಾನಿಕ ಶರಾವತಿ ಸ್ಟೋರೇಜ್ ಯೋಜನೆ ಕೈಬಿಡವುದು. ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನವರಿಗೆ ಮೋಸ ಮಾಡಿದ ಇನಾಮದಾರ್‌ ಕುಟುಂಬಗಳಿಗೆ ಒಂದಿಂಚು ಭೂಮಿ ನೀಡಿದೆ ಎಲ್ಲ ಭೂಮಿ ರೈತರಿಗೆ ಹಂಚಿಕೆ ಮಾಡಬೇಕು. ರೈತ ವಿರೋಧಿ ಪರಿಷ್ಕೃತ ಕಾನೂನುಗಳಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ ಹಾಗೂ ರೈತ ಹೋರಾಟಗಾರರ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಯ ಸಲುವಾಗಿ ಸುವರ್ಣಸೌಧದಲ್ಲಿ ಎಲ್ಲ ಕಾರ್ಯದರ್ಶಿಗಳ ಕಚೇರಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ರೈತರ ಸಮಸ್ಯೆ ಆಲಿಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಶಿಕಾಂತ ಗುರೂಜಿ, ಪ್ರಕಾಶ ಚೂನಪ್ಪಾ ಪೂಜೇರಿ, ಪ್ರಕಾಶ ನಾಯಕ, ಸತ್ಯಪ್ಪ ಮಲ್ಲಾಪುರೆ, ರಮೇಶ ವಾಲಿ, ಬಾಬುಗೌಡ ಪಾಟೀಲ, ಗಂಗಾಧರ ಮೇಟಿ, ಕುಮಾರ ಮರದಿ, ಸುಭಾಸ ಮದನ್ನವರ, ಸಂಗಮೇಶ ಸಾಗರ, ಮಂಜು ಪೂಜೇರಿ, ಶಿವಾನಂದ ದೊಡವಾಡ, ಆಸಮಾ ಜೂಟದಾರ ಸೇರಿದಂತೆ ಇತರರು ಇದ್ದರು.