ಸಾರಾಂಶ
ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ವಿವಿಧ ಸಂಘಟನೆಗಳಿಂದ ಮುಧೋಳ- ನಿಪ್ಪಾಣಿ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ₹೩೫೦೦ ಬೆಲೆ ನಿಗದಿಗೊಳಿಸಿ, ತಕ್ಷಣ ಬಾಕಿ ಬಿಲ್ ನೀಡಬೇಕೆಂದು ಒತ್ತಾಯಿಸಿ ಸಮೀಪದ ರನ್ನ ಬೆಳಗಲಿ ಪಟ್ಟಣದ ಜನತಾ ಕಾಲೋನಿಯ ರೈತ ಸಂಘ ನೇತಾರ ರಮೇಶ ಗಡ್ದಣ್ಣವರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ವಿವಿಧ ಸಂಘಟನೆಗಳಿಂದ ಮುಧೋಳ- ನಿಪ್ಪಾಣಿ ಹೆದ್ದಾರಿ ಬಂದ್ ಮಾಡಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.ನೂರಾರು ರೈತರ ಸಮಸ್ಯೆಗಳಿಗೆ ಸ್ಪಂದಿಸದಿರುವ ಮುಖ್ಯಮಂತ್ರಿಗಳು, ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳ ವಿರುದ್ಧ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಪರಮಾನಂದ ಸಂಕ್ರಟ್ಟಿ ಮಾತನಾಡಿ, ಸರ್ಕಾರವು ಸಕ್ಕರೆ ಕಾರ್ಖಾನೆ ಮಾಲೀಕರ ಗುಲಾಮರಂತೆ ವರ್ತಿಸುತ್ತಿದೆ. ಹೊರತು ರೈತರ ಹಿತ ಕಾಯುತ್ತಿಲ್ಲ. ₹೩೫೦೦ ಬೆಲೆ ಘೋಷಣೆ ಮಾಡಿ, ಕಬ್ಬಿನ ಬಾಕಿ ಬಿಲ್‌ಗಳನ್ನು ತಕ್ಷಣ ನೀಡಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಬೇಕು. ಇಲ್ಲದಿದ್ದರೆ ಹೋರಾಟ ಕೈ ಬಿಡುವುದಿಲ್ಲ. ಗೊಬ್ಬರ, ಪೆಟ್ರೋಲ್, ಡೀಸೆಲ್, ಬಂಗಾರ, ದಿನಬಳಕೆ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿವೆ. ಆದರೆ ರೈತರು ಬೆಳೆಯುವ ಬೆಳೆಗಳ ದರ ಮಾತ್ರ, ಇದ್ದಷ್ಟೇ ಇದೆ. ನೆರೆಹೊರೆಯ ರಾಜ್ಯಗಳಲ್ಲಿ ₹೩೬೦೦ರೂ ಗಿಂತಲೂ ಹೆಚ್ಚಿನ ಬೆಲೆ ಪ್ರತಿ ಟನ್ ಕಬ್ಬಿಗೆ ನೀಡುತ್ತಿವೆ. ಅವರಿಗೆ ಸಾಧ್ಯವಾಗಿರುವಾಗ ಕರ್ನಾಟಕದ ಸಕ್ಕರೆ ಕಾರ್ಖಾನೆಯವರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.ರೈತ ಮುಖಂಡ ಮಲ್ಲಿಕಾರ್ಜುನ ರಾಮದುರ್ಗ ಮಾತನಾಡಿ, ಆರು ದಿನಗಳಿಂದ ನಿರಂತರವಾಗಿ ಗುರ್ಲಾಪುರ ಕ್ರಾಸ್‌ನಲ್ಲಿ ನಮ್ಮ ರೈತರು ಬೃಹತ್ ಹೋರಾಟ ಮಾಡುತ್ತಿದ್ದಾರೆ. ಕಳೆದ ಅಕ್ಟೋಬರ್ ೧೬ರಂದು ಸರ್ಕಾರ ಜೊತೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಕೇವಲ ₹೫೦ ಘೋಷಿಸಿದರು. ಅವರ ₹೫೦ ಭಿಕ್ಷೆಗೆ ನಾವು ರೈತರು ಕೈ ಚಾಚುವುದಿಲ್ಲ. ದೇಶಕ್ಕೆ ಅನ್ನ ಹಾಕುವ ರೈತ ಬೀದಿಗಿಳಿದು ನ್ಯಾಯಕ್ಕಾಗಿ ಹೊರಡುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಪಂ ಸದಸ್ಯರಾದ ಸದಾಶಿವ ಸಂಕ್ರಟ್ಟಿ, ಮುತ್ತಪ್ಪ ನಾಯಕ, ಕರೆಯಪ್ಪ ಕುಂಬಾಳಿ, ರೈತ ಮುಖಂಡರಾದ ಮುತ್ತಪ್ಪ ಚಿಕ್ಕಣ್ಣವರ, ಮಹಾಲಿಂಗಪ್ಪ ಕೊಣ್ಣೂರ, ಮಹಾಲಿಂಗಪ್ಪ ಶೇಗುಣಿಸಿ, ಪರಪ್ಪ ಚಿಕ್ಕಣ್ಣವರ, ಶಿವಪ್ಪ ಚಂದಪ್ಪನವರ,ಯಮನಪ್ಪ ಚಂದಪ್ಪನವರ,ಯಮನಪ್ಪ ಕಣಬೂರ, ಮಹಾಲಿಂಗಪ್ಪ ಉಸಳಿ, ಶಿವಪ್ಪ ಕಣಬೂರ, ಸಿದ್ದಪ್ಪ ಗರಗದ, ಲಕ್ಷ್ಮಣ ನಾಯಕ, ಭೀಮಶಿ ಕಾನನವರ, ಗಂಗಪ್ಪ ಹೊಸೂರ ಸೇರಿದಂತೆ ನೂರಾರು ರೈತರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))