ಸಾರಾಂಶ
ಪ್ರತಿವರ್ಷದಂತೆ ಈ ವರ್ಷ ಕೂಡಾ ಸ್ವಾತಂತ್ರ್ಯ ಯೋಧ ಸಾಬಣ್ಣ ಶಿಂಧೆ ಅವರ ಮನೆ ಮುಂದೆ ಆ.15ರಂದು ಧ್ವಜಾರೋಹಣ ನಡೆಯಲಿದೆ. ಸಾಬಣ್ಣ ಇಂದು ಜೀವಂತವಿಲ್ಲ. ಸ್ವಾತಂತ್ರ್ಯ ಸಿಕ್ಕ ದಿನದಿಂದ ಅವರು ತಮ್ಮ ಮನೆ ಮುಂದೆ ಮಾಡಿಕೊಂಡು ಬಂದ ಧ್ವಜಾರೋಹಣ ಕಾರ್ಯಕ್ರಮ ಇನ್ನೂ ನಿಂತಿಲ್ಲ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪ್ರತಿವರ್ಷದಂತೆ ಈ ವರ್ಷ ಕೂಡಾ ಸ್ವಾತಂತ್ರ್ಯ ಯೋಧ ಸಾಬಣ್ಣ ಶಿಂಧೆ ಅವರ ಮನೆ ಮುಂದೆ ಆ.15ರಂದು ಧ್ವಜಾರೋಹಣ ನಡೆಯಲಿದೆ.ಸಾಬಣ್ಣ ಇಂದು ಜೀವಂತವಿಲ್ಲ. ಸ್ವಾತಂತ್ರ್ಯ ಸಿಕ್ಕ ದಿನದಿಂದ ಅವರು ತಮ್ಮ ಮನೆ ಮುಂದೆ ಮಾಡಿಕೊಂಡು ಬಂದ ಧ್ವಜಾರೋಹಣ ಕಾರ್ಯಕ್ರಮ ಇನ್ನೂ ನಿಂತಿಲ್ಲ. ಅವರ ಮರಣಾನಂತರವೂ ಅವರ ಕುಟುಂಬ ವರ್ಗದವರು ಮುಂದುವರೆಸಿಕೊಂಡು ಬಂದಿದ್ದಾರೆ. ಸಾಬಣ್ಣ ಶಿಂಧೆ ಇಡೀ ತಮ್ಮ ಬದುಕನ್ನೇ ಸ್ವಾತಂತ್ರ್ಯ ಹೋರಾಟದಲ್ಲಿ ಕಳೆದವರು. ಅವರು ಅಗಲಿ 37 ವರ್ಷಗಳು ಗತಿಸಿವೆ. ಅವರು ಜೀವಂತ ಇರುವ ತನಕ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ತಪ್ಪದೇ ಮಾಡಿಕೊಂಡು ಬಂದರು. 1986 ರಲ್ಲಿ ಅವರು ಮರಣ ಹೊಂದಿದ ಬಳಿಕವೂ ಅವರ ಮನೆಯ ಮುಂದೆ ಇನ್ನೂ ಧ್ವಜಾರೋಹಣದ ಆ ಸಂಭ್ರಮ ನಿಂತಿಲ್ಲ.
1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸಾಬಣ್ಣ ಪಾಲ್ಗೊಂಡಿದ್ದರು. ಬ್ರಿಟಿಷರ ಕಣ್ಣು ತಪ್ಪಿಸಿ ಕೆಲವು ಸಲ ಮಹಿಳೆಯರ ವೇಷಧರಿಸಿ ತಿರುಗಾಡುತ್ತ ಅವರ ವಿರುದ್ಧದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೂ ಉಂಟು. ಟೆಲಿಫೋನ್ ತಂತಿ ಕಟ್ ಮಾಡಿದ್ದು, ರೈಲು ಹಳಿ ಕಿತ್ತಿದ್ದು, ಅಂಚೆ ಪೆಟ್ಟಿಗೆ ನಾಶ ಮಾಡಿದ ಪ್ರಸಂಗಗಳು ಬ್ರಿಟಿಷ್ ವಿರುದ್ಧ ಮಾಡಿದ ಇಂತಹ ಅನೇಕ ಕಾರ್ಯಾಚರಣೆಗಳು ಬ್ರಿಟಿಷರನ್ನು ನಿದ್ದೆಗೆಡಿಸುವಂತೆ ಮಾಡಿದ್ದವು.ಸ್ವಾತಂತ್ರ್ಯಾ ನಂತರ ಸಾಬಣ್ಣ ಅವರಿಗೆ ಸರ್ಕಾರ ನೀಡುತ್ತಿದ್ದ ಮಾಸಾಶನವನ್ನು ಸರ್ಕಾರಕ್ಕೆ ಮರಳಿಸಿದ್ದು ಅವರ ದೇಶ ಪ್ರೇಮದ ಪ್ರತೀಕವಾಗಿದೆ. 1986 ರಲ್ಲಿ ಸಾಬಣ್ಣ ಶಿಂಧೆ ನಮ್ಮಿಂದ ಭೌತಿಕವಾಗಿ ದೂರಾದರೂ ಅವರ ಸ್ವಾತಂತ್ರ್ಯ ಸಂಭ್ರಮದ ದಿನಾಚರಣೆ ಮಾತ್ರ ಇಂದಿಗೂ ಮುಂದುವರೆದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಈ ವರ್ಷ ಸಾಬಣ್ಣ ಅವರ ಮನೆ ಮುಂದೆ ಜರುಗುವ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾಬಣ್ಣ ಶಿಂಧೆ ಅವರ ಮೊಮ್ಮಕ್ಕಳು, ಓಣಿಯ ಹಿರಿಯರು ಹಾಗೂ ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 7 ಗಂಟೆಗೆ ಸರಿಯಾದ ಸಮಯಕ್ಕೆ ಧ್ವಜಾರೋಹಣ ನೆರವೇರಲಿದೆ.