ಬೆಳಗಾವಿ, ನಿಪ್ಪಾಣಿ, ಸಂಕೇಶ್ವರ, ಅಥಣಿ, ಗೋಕಾಕ, ಚಿಕ್ಕೋಡಿ ಮುಂತಾದ ಕಡೆಯ ಕುರುಬರು ಮಳೆಗಾಲ ಮುಗಿಯುತ್ತಿದ್ದಂತೆ ಗುಳೆ ಹೊರಟು ಈ ಭಾಗಕ್ಕೆ ಆಗಮಿಸುತ್ತಾರೆ.
ಸಂತೋಷ ದೈವಜ್ಞ
ಮುಂಡಗೋಡ: ಈ ಬಾರಿ ತಾಲೂಕಿನಲ್ಲಿ ತೀವ್ರ ಬರವಿದ್ದರೂ ಭತ್ತ ಕಟಾವು ಪ್ರಕ್ರಿಯೆ ಆರಂಭವಾಗಿದ್ದು, ಇನ್ನೊಂದೆಡೆ ಬಯಲುಸೀಮೆ ಪ್ರದೇಶದ ಕುರಿಗಳ ಹಿಂಡುಗಳು ಮುಂಡಗೋಡಕ್ಕೆ ಬಂದಿದ್ದು, ಎಲ್ಲಿ ನೋಡಿದರೂ ಕುರಿಗಳೇ ಕಾಣುತ್ತಿವೆ.ಮಳೆಗಾಲ ಮುಗಿದು ಭತ್ತದ ಸುಗ್ಗಿ ಆರಂಭವಾಗುತ್ತಿದ್ದಂತೆ ಕುರುಬರು ತಮ್ಮ ನೂರಾರು ಸಂಖ್ಯೆಯ ಕುರಿಗಳೊಂದಿಗೆ ಊರೂರು ಅಲೆದು ರೈತರ ಗದ್ದೆಯಲ್ಲಿ ಕುರಿಗಳೊಂದಿಗೆ ಠಿಕಾಣಿ ಹೂಡಿ ರೈತರಿಂದ ಧಾನ್ಯ ಪಡೆಯುವ ಸಂಪ್ರದಾಯ ಮೊದಲಿನಿಂದಲೂ ಬಂದಿದೆ. ಅದೇ ರೀತಿ ಈ ವರ್ಷವೂ ಕುರುಬರು ಕುರಿಗಳ ಹಿಂಡಿನೊಂದಿಗೆ ಕುಟುಂಬ ಸಮೇತ ಸಾಕುಪ್ರಾಣಿಗಳಾದ ಕುದುರೆ ಹಾಗೂ ನಾಯಿಗಳೊಂದಿಗೆ ಆಗಮಿಸಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಸಂಕೇಶ್ವರ, ಅಥಣಿ, ಗೋಕಾಕ, ಚಿಕ್ಕೋಡಿ ಮುಂತಾದ ಕಡೆಯ ಕುರುಬರು ಮಳೆಗಾಲ ಮುಗಿಯುತ್ತಿದ್ದಂತೆ ಗುಳೆ ಹೊರಟು ಈ ಭಾಗಕ್ಕೆ ಆಗಮಿಸುತ್ತಾರೆ. ಪ್ರತಿವರ್ಷ ಇಲ್ಲಿಯ ಪ್ರಧಾನ ಬೆಳೆ ಭತ್ತದ ಫಸಲು ಕಟಾವಿನ ವೇಳೆ ಈ ಭಾಗ ಪ್ರವೇಶಿಸುವ ಕುರುಬರು, ಕೆಲ ತಿಂಗಳುಗಳ ಕಾಲ ತಿರುಗಾಡಿ ಕುರಿಗಳ ಸಂತಾನೋತ್ಪತ್ತಿ ಮಾಡಿಕೊಂಡು ಮಳೆಗಾಲ ಆರಂಭವಾಗುವ ಮುನ್ನ ಮರಳಿ ತಮ್ಮ ಊರಿಗೆ ಹೋಗುವುದು ಸಾಮಾನ್ಯ.ಭತ್ತದ ಕಣಜ ಎಂದೇ ಹೆಸರುವಾಸಿಯಾಗಿರುವ ಮುಂಡಗೋಡ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಬರುತ್ತಾರೆ. ಒಂದು ದಿನ ಒಂದು ಕಡೆ ಠಿಕಾಣಿ ಹೂಡಿದರೆ ಇನ್ನೊಂದು ದಿನ ಮತ್ತೊಂದು ಊರಿನ ರೈತರ ಭೂಮಿಯಲ್ಲಿ ಬೀಡು ಬಿಡುತ್ತಾರೆ. ಇದರಿಂದ ಕುರಿಗಳಿಗೆ ಮೇವು ಸಿಗುತ್ತದೆ. ಅಲ್ಲದೆ ರೈತರ ಗದ್ದೆಗಳಿಗೆ ಗೊಬ್ಬರವೂ ಆಗುತ್ತದೆ. ಇದರಿಂದ ರೈತರು ಕೂಡ ಕುರಿ ಹಿಂಡು ತಮ್ಮ ಗದ್ದೆಯಲ್ಲಿ ಬೀಡು ಬಿಡಲಿ ಎಂದು ಬಯಸುತ್ತಾರೆ.
ಈ ಕುರುಬರು ವರ್ಷದಲ್ಲಿ ೬ ತಿಂಗಳು ಹಗಲು- ರಾತ್ರಿ ಚಳಿ, ಗಾಳಿ, ಬಿಸಿಲು ಎಂಬುದನ್ನು ಲೆಕ್ಕಿಸದೇ ತಮ್ಮ ಬಳಗವನ್ನು ಕಟ್ಟಿಕೊಂಡು ಊರು, ಕೆರೆ ಅಲೆಯುತ್ತಾರೆ. ನೂರಾರು ಕುರಿಗಳೊಂದಿಗೆ ಇಲ್ಲಿಗೆ ಆಗಮಿಸುವ ಇವರು, ಒಂದಕ್ಕೆ ನಾಲ್ಕು ಪಟ್ಟು ಕುರಿಗಳ ಸಂತತಿ ಹೆಚ್ಚಿಸಿಕೊಂಡು ಮರಳುತ್ತಾರೆ. ಅಲ್ಲದೆ ರೈತರ ಭೂಮಿಯಲ್ಲಿ ಬೀಡು ಬಿಡಲು ದಿನಕ್ಕೆ ಇಂತಿಷ್ಟು ದವಸ ಧಾನ್ಯವನ್ನು ಕೃಷಿಕರಿಂದ ಪಡೆದುಕೊಳ್ಳುತ್ತಾರೆ.ಕುರಿಗಳು ಗದ್ದೆಯಲ್ಲಿ ಮೂತ್ರ ಹಾಗೂ ಹಿಕ್ಕಿ ಹಾಕುವುದರಿಂದ ಗದ್ದೆಗೆ ಫಲವತ್ತಾದ ಗೊಬ್ಬರ ದೊರೆಯುತ್ತದೆ. ಹಾಗಾಗಿ ರೈತರೂ ಕುರಿಗಳ ತಂಡವನ್ನು ವಾಸ ಮಾಡಿಸಿಕೊಳ್ಳಲು ಮುಗಿಬೀಳುತ್ತಾರೆ. ಸದ್ಯ ಭತ್ತದ ಕೊಯ್ಲು ನಡೆಯುತ್ತಿದ್ದು, ಖಾಲಿಯಾಗುವ ಭತ್ತದ ಭೂಮಿಯಲ್ಲಿ ಬೀಡು ಬಿಡಲು ನಿತ್ಯ ಕುರಿಗಳ ದಂಡು ಆಗಮಿಸುತ್ತಿದೆ.
ಈ ಬಾರಿ ಮಳೆಯ ಕೊರತೆಯಿಂದಾಗಿ ಭತ್ತದ ಫಸಲು ಕೈಕೊಟ್ಟಿದ್ದು, ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಇಲ್ಲಿಯ ರೈತರು ಸಿಕ್ಕಷ್ಟು ಸಿಗಲಿ ಎಂದು ಭತ್ತದ ಫಸಲನ್ನು ಕಟಾವು ಮಾಡಿಸುತ್ತಿದ್ದಾರೆ. ಈ ಮಧ್ಯೆ ನಿರಾಶೆಯ ನಡುವೆಯೂ ಕುರುಬ ಸಮುದಾಯ ಪ್ರತಿ ವರ್ಷದಂತೆ ಈ ಬಾರಿ ಕೂಡ ಆಗಮಿಸಿದೆ.