ಕರಾವಳಿಯುದ್ದಕ್ಕೂ ಪ್ರವಾಹ ಭೀತಿ

| N/A | Published : Jul 26 2025, 01:30 AM IST / Updated: Jul 26 2025, 12:39 PM IST

ಸಾರಾಂಶ

 ಕುಮಟಾ ಹಾಗೂ ಹೊನ್ನಾವರದಲ್ಲಿ 12 ಕಾಳಜಿ ಕೇಂದ್ರ ತೆರೆದಿದ್ದು, 263 ಜನರು ಆಶ್ರಯ ಪಡೆದಿದ್ದಾರೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಜು.26ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಕಾರವಾರ: ಜಿಲ್ಲೆಯಾದ್ಯಂತ ಮಳೆ ಹಾವಳಿ ಮುಂದುವರಿದಿದೆ. ಕುಮಟಾ ಹಾಗೂ ಹೊನ್ನಾವರದಲ್ಲಿ 12 ಕಾಳಜಿ ಕೇಂದ್ರ ತೆರೆದಿದ್ದು, 263 ಜನರು ಆಶ್ರಯ ಪಡೆದಿದ್ದಾರೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಜು.26ರಂದು ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಕರಾವಳಿಯಾದ್ಯಂತ ಮಳೆ ಆರ್ಭಟಿಸುತ್ತಿದೆ. ಕುಮಟಾದ ಬಡಗಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ. ಹಿರೇಕಟ್ಟು ಮಜರೆಯ 10 ಕುಟುಂಬಗಳ 23 ಜನರು ಕೋನಳ್ಳಿಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕೆಳಗಿನಕೇರಿ ಹಾಗೂ ಗುಮ್ಮನಗುಡಿ ಮಜರೆಯ 12 ಕುಟುಂಬಗಳ 32 ಜನರು ಕಡವು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿ ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿದೆ. ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ. ಭಾಸ್ಕೇರಿ, ದೊಡ್ಡ ಹಿತ್ತಲ, ಗಜನಿ ಕೇಂದ್ರ, ಶಶಿಹಿತ್ಲ ಸುತ್ತಮುತ್ತಲಿನ ಅಂದಾಜು 118 ಕುಟುಂಬದವರು ಮಳೆಯಿಂದ ಸಮಸ್ಯೆಗೊಳಗಾಗಿದ್ದಾರೆ. ನದಿ ತೀರದಲ್ಲಿ ನೀರಿನಲ್ಲಿ ಸಿಲುಕಿದವರನ್ನು ಎನ್‌ಡಿಆರ್‌ಎಫ್ ತಂಡ ಹಾಗೂ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿ ಕಾಳಜಿ ಕೇಂದ್ರಕ್ಕೆ ಕರೆ ತರಲಾಗಿದೆ.

ಹೊನ್ನಾವರ ತಾಲೂಕಿನ ಗುಡ್ಡೆಬಾಳದ ಕಾಳಜಿ ಕೇಂದ್ರದಲ್ಲಿ 11 ಜನರು ಆಶ್ರಯ ಪಡೆದಿದ್ದಾರೆ. ಗುಂಡಿಬೈಲದ 2 ಕಾಳಜಿ ಕೇಂದ್ರದಲ್ಲಿ 24 ಜನರು, ಮುಗ್ವಾದಲ್ಲಿ 30, ಭಾಸ್ಕೇರಿಯಲ್ಲಿ 10, ಕಲ್ಕಟ್ಟೆಯಲ್ಲಿ 6, ಗುಂಡಬಾಳದಲ್ಲಿ 5, ಹೆಬೈಲ್ ಅಂಗನವಾಡಿ ಕಾಳಜಿ ಕೇಂದ್ರದಲ್ಲಿ 6, ಮಾಡಗೇರಿ 4 ಹಾಗೂ ಮಲ್ಲಾಪುರದ ಕಾಳಜಿ ಕೇಂದ್ರದಲ್ಲಿ 40 ಜನರು ಆಶ್ರಯ ಪಡೆದಿದ್ದಾರೆ.

ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರಗಳಲ್ಲೂ ಭಾರಿ ಮಳೆಯಾಗುತ್ತಿದೆ. ಶಿರಸಿ, ಯಲ್ಲಾಪುರ, ಸಿದ್ಧಾಪುರ, ಮುಂಡಗೋಡ, ಜೋಯಿಡಾ, ದಾಂಡೇಲಿಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಹಳಿಯಾಳದಲ್ಲಿ ಮೊದಲ ಬಾರಿಗೆ ಭಾರಿ ಮಳೆಯಾಗಿದೆ.

ರೆಡ್ ಅಲರ್ಟ್‌, ಶಾಲಾ ಕಾಲೇಜಿಗೆ ರಜೆ:

ಹವಾಮಾನ ಇಲಾಖೆ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆ ತನಕ ರೆಡ್ ಅಲರ್ಟ್ ಸೂಚನೆ ನೀಡಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ನೀಡಲಾಗಿದೆ.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಹಾಗೂ ಎಲ್ಲ ಕಾಲೇಜುಗಳಿಗೆ (ಪರೀಕ್ಷೆಗಳನ್ನು ಹೊರತು ಪಡಿಸಿ) ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

Read more Articles on