ಸಾರಾಂಶ
ಖಾಜು ಸಿಂಗೆಗೋಳ
ಇಂಡಿ : ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ಉಜ್ಜನಿ ಹಾಗೂ ನೀರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಭೀಮಾನದಿಗೆ ಹರಿದು ಬರುತ್ತಿದೆ. ಇದರಿಂದ ಭೀಮಾನದಿಯ ಎರಡೂ ದಂಡೆಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಲು ಈಗಾಗಲೇ ಡಂಗೂರ ಸಾರಲಾಗುತ್ತಿದೆ. ಜತೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಸ್ಥಳೀಯ ಆಡಳಿತವು ಮನವಿಯನ್ನು ಮಾಡಿದೆ.
ಮಹಾರಾಷ್ಟ್ರದ ಉಜ್ಜನಿ ಹಾಗೂ ನೀರಾ ಜಲಾಶಯದಿಂದ ಭೀಮಾನದಿಗೆ ಎರಡು ದಿನದಲ್ಲಿ ಒಟ್ಟು 1.70 ಲಕ್ಷ ಕ್ಯು. ನೀರು ಹರಿಬಿಡಲಾಗಿದೆ. ಗುರುವಾರ ಹಾಗೂ ಶುಕ್ರವಾರ ಭೀಮಾನದಿಗೆ ಮತ್ತೇ ನೀರು ಬಿಟ್ಟರೆ ಭೀಮಾನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈಗ ಬಂದಿರುವ ನೀರು ಕೂಡ ನದಿ ತೀರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಮತ್ತಷ್ಟು ನೀರು ಮಹಾರಾಷ್ಟ್ರದಿಂದ ಬಂದರೆ ಜನಜೀವನಕ್ಕೆ ಮತ್ತಷ್ಟು ತೊಂದರೆಯಾಗಲಿದೆ.
ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ಬ್ಯಾರೇಜ್‌ಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಸಂದಿಸುವ ಬ್ಯಾರೇಜ್ ಮೇಲಿನ ರಸ್ತೆ ಸಂಚಾರವು ಸ್ಥಗಿತಗೊಂಡಿದೆ. ಗಡಿಭಾಗದಲ್ಲಿರುವ ಇಂಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದ ಉಂಟಾಗುವ ಸಂಭವ ನಿರ್ಮಾಣವಾಗಿದೆ.
ಭೀಮಾತೀರದ ಗ್ರಾಮಗಳಲ್ಲಿ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದು, ಗ್ರಾಮಗಳಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಡಂಗೂರು ಸಾರಿಸಿ, ಗ್ರಾಮಸ್ಥರಲ್ಲಿ ಎಚ್ಚರಿಕೆ ಮೂಡಿಸುವ ಕಾರ್ಯ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಟಾಕಳಿ ಬಳಿಯ ಭೀಮಾನದಿಯ ಬ್ಯಾರೇಜ್‌ನಲ್ಲಿ 9 ಮೀ. ನೀರು ಇದ್ದು, ನೀರಿನ ಪ್ರಮಾಣ 14 ಮೀ. ಆದರೆ ಪ್ರವಾಹ ಎದುರಾಗುವ ಸಾಧ್ಯತೆಯಿದೆ.
ವಿಜಯಪುರ- ಸೋಲಾಪೂರ ರಸ್ತೆ ಸ್ಥಗಿತ:
ಇಂಡಿ ತಾಲೂಕಿನ ವ್ಯಾಪ್ತಿಯಲ್ಲಿ ಹರಿದಿರುವ ಭೀಮಾನದಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿ 9 ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಉಮರಾಣಿ, ಔಜ್, ಧೂಳಖೇಡ, ಚಿಂಚಪುರ, ಹಿಂಗಣಿ ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿದ್ದು, ಬುಯ್ಯಾರ ಬ್ಯಾರೇಜ್ ಮೇಲೆ ನೀರು ಹರಿಯುವ ಹಂತ ತಲುಪಿದೆ.
ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಕೂಡ ಬಂದ್ ಆಗಿದೆ. ಬುಯ್ಯಾರ ಬ್ಯಾರೇಜ್ ಮೂಲಕ ವಿಜಯಪುರ-ಕಲಬುರಗಿ ಹೋಗುವ ರಸ್ತೆ ಹಾಗೂ ಹಿಂಗಣಿ ಬ್ಯಾರೇಜ್ ಮೂಲಕ ವಿಜಯಪುರ- ಸೋಲಾಪೂರಕ್ಕೆ ಹೋಗುವ ರಸ್ತೆ ಸ್ಥಗಿತಗೊಂಡಿದೆ.
ಭೀಮಾನದಿಯಲ್ಲಿನ ಗೋವಿಂದಪೂರ, ಚಣೆಗಾಂವ, ಕಡ್ಲೇವಾಡ, ಶಿರನಾಳ, ಹಿಳ್ಳಿ ಬ್ಯಾರೇಜ್‌ಗಳ ಮೇಲೆ ನೀರು ಅಪಾಯದ ಮಟ್ಟಮೀರಿ ಹರಿಯುತ್ತಿದೆ. ಸೊನ್ನ ಬಳಿ ನಿರ್ಮಿಸಿದ ಅಣೆಕಟ್ಟಿನ ಹಿನ್ನೀರಿನಿಂದ ಮಿರಗಿ-ರೋಡಗಿ ರಸ್ತೆ ಮಧ್ಯ ಹಳ್ಳಕ್ಕೆ ನಿರ್ಮಿಸಿದ ಬ್ಯಾರೇಜ್ ತುಂಬಿ ಹರಿಯುತ್ತಿದೆ.
ಭೀಮಾನದಿಗೆ ಉಜ್ಜನಿ ಜಲಾಶಯದಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಉಜ್ಜನಿ ಜಲಾಶಯದಿಂದ 2 ಲಕ್ಷ ಕ್ಯು. ನೀರು ಹರಿದು ಬಿಟ್ಟರೆ ಸ್ವಲ್ಪಮಟ್ಟಿಗೆ ತೊಂದರೆಯಾಗುತ್ತದೆ. ಸದ್ಯ ಪರಿಸ್ಥಿತಿಯಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರವಾಹ ಎದುರಿಸಲು ಪೂರ್ವ ತಯಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಇಂಡಿ ಎಸಿ ಅನುರಾಧಾ ವಸ್ತ್ರದ ತಿಳಿಸಿದರು.
ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ಸಭೆ ಕರೆದು ಭೀಮಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಪ್ರವಾಹ ಉಂಟಾಗುವ ಕುರಿತು ಜಾಗೃತಿ ವಹಿಸಲು ಸೂಚಿಸಲಾಗಿದೆ. ಭೀಮಾನದಿ ದಂಡೆಯ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ದಿನ ಭೀಮಾನದಿಯಲ್ಲಿನ ನೀರಿನಮಟ್ಟ ಹಾಗೂ ಪರಿಸ್ಥಿತಿ ನೀಡಲು ಸೂಚಿಸಲಾಗಿದೆ. ಸದ್ಯಕ್ಕೆ ಪ್ರವಾಹದ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ಇರಬೇಕು ಎಂದು ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಹೇಳಿದರು.