ಪ್ರವಾಹಕ್ಕೆ ಬೀದಿ ಪಾಲಾದ ಬದುಕು!

| Published : Aug 03 2024, 12:37 AM IST

ಸಾರಾಂಶ

ಕೃಷ್ಣಾ ನದಿಯ ಪ್ರವಾಹದ ಹೊಡೆತಕ್ಕೆ ತಾಲೂಕಿನ 23 ಗ್ರಾಮಗಳು ಇದೀಗ ತುತ್ತಾಗಿವೆ. ಆದರೆ, ವಾಸಿಸಲು ಮನೆ, ಉಣ್ಣಲು ಅನ್ನ, ಕುಡಿಯಲು ನೀರು ಇಲ್ಲದೇ ತಮ್ಮ ಜಾನುವಾರುಗಳ ಜೊತೆ ಸಂಬಂಧಿಕರ ಮನೆ, ಕಾಳಜಿ ಕೇಂದ್ರ ಆಸರೆ ಪಡೆದುಕೊಂಡಿದ್ದಾರೆ. ಈ ಮೂಲಕ ನೆರೆ 23 ಗ್ರಾಮಗಳ ಜನರನ್ನು ಪರದೇಶಿಯನ್ನಾಗಿಸಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ಕೃಷ್ಣಾ ನದಿಯ ಪ್ರವಾಹದ ಹೊಡೆತಕ್ಕೆ ತಾಲೂಕಿನ 23 ಗ್ರಾಮಗಳು ಇದೀಗ ತುತ್ತಾಗಿವೆ. ಆದರೆ, ವಾಸಿಸಲು ಮನೆ, ಉಣ್ಣಲು ಅನ್ನ, ಕುಡಿಯಲು ನೀರು ಇಲ್ಲದೇ ತಮ್ಮ ಜಾನುವಾರುಗಳ ಜೊತೆ ಸಂಬಂಧಿಕರ ಮನೆ, ಕಾಳಜಿ ಕೇಂದ್ರ ಆಸರೆ ಪಡೆದುಕೊಂಡಿದ್ದಾರೆ. ಈ ಮೂಲಕ ನೆರೆ 23 ಗ್ರಾಮಗಳ ಜನರನ್ನು ಪರದೇಶಿಯನ್ನಾಗಿಸಿದೆ.ಮುತ್ತೂರು ನಡುಗಡ್ಡೆ ಪ್ರದೇಶ, ಆಲಗೂರು ಗೌಡರಗಡ್ಡೆ, ಹಿರೇಪಡಸಲಗಿಯ ಪ್ಲಾಟ್‌, ಕಂಕಣವಾಡಿ, ಶೂರ್ಪಾಲಿ, ಕಡಕೋಳ, ಜಂಬಗಿ ಸೇತುವೆಯ ಹತ್ತಿರದ ಜಮೀನು ಮತ್ತು ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ರೈತರಲ್ಲಿ ಅನುಕೂಲಸ್ಥರು ಸಂಬಂಧಿಕರ ಮನೆಗಳಿಗೆ, ಕೆಲವರು ಎತ್ತರ ಪ್ರದೇಶಗಳಿಗೆ ಇನ್ನೂ ಕೆಲವರು ಸರ್ಕಾರದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಬೆಳೆ ನೀರು ಪಾಲು:

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾನದಿ ಮೈತುಂಬಿ ಹರಿಯುತ್ತಿದ್ದು, ನದಿಯ ಸಮೀಪದ ಹಳ್ಳ-ಕೊಳ್ಳಗಳು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನದಿಯ ಹತ್ತಿರದ ಜಮೀನುಗಳಿಗೆ ನೀರು ನುಗ್ಗಿದ್ದು ಕಬ್ಬು, ಗೋವಿನಜೋಳ, ಮುಂತಾದ ಬೆಳೆಗಳು ಹಿನ್ನೀರಿನ ಪಾಲಾಗಿವೆ.

ಈ ವರ್ಷದ ಪ್ರವಾಹದದಿಂದಾಗಿ ಸಾವಿರಾರು ಹೆಕ್ಟೇರ್ ಬೆಳೆಗಳು ನೀರಿನಲ್ಲಿ ಮುಳುಗಿವೆ. ತಾಲೂಕಿನ ರೈತರು ಬೆಳೆದ ಕಬ್ಬು, ಭತ್ತ, ಸೋಯಾ, ಅವರೆ, ಮುಸುಕಿನ ಜೋಳ, ಈರುಳ್ಳಿ, ಹೆಸರು ಬೆಳೆ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ನೆರೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅನೇಕ ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಧಾನ್ಯಗಳು ಪ್ರವಾಹದ ಪಾಲಾಗಿವೆ.

ಸರ್ಕಾರ ಆಸರೆಯಾಗಲಿ:

ಕೃಷ್ಣಾ ನದಿಯ ಪ್ರವಾಹ ಹೊಡೆತಕ್ಕೆ ತಾಲೂಕಿನ ರೈತರ ಬದುಕು ಇದೀಗ ಮೂರಾಬಟ್ಟೆಯಾಗಿದೆ. ಸರ್ಕಾರವು ಆದಷ್ಟು ಬೇಗ ನೊಂದ ರೈತರಿಗೆ ಆಸರೆಯಾಗಿ ನಿಲ್ಲಬೇಕಿದೆ. ಪ್ರವಾಹಕ್ಕೆ ತುತ್ತಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕಿದೆ. ಸರ್ಕಾರಗಳು ರೈತರ ಜೊತೆ ನಿಂತಾಗ ಮಾತ್ರ ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಾಧ್ಯ.

ಅಪೂರ್ಣ ಯೋಜನೆಯೇ ಶಾಪ:

ಕೃಷ್ಣಾ ಮೇಲ್ದಂಡೆ ಯೋಜನೆ ಅಪೂರ್ಣಗೊಂಡಿದ್ದರಿಂದ ಇಲ್ಲಿಯ ರೈತರಿಗೆ, ಸಾರ್ವಜನಿಕರಿಗೆ ಪ್ರತಿವರ್ಷ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ ಅಭ್ಯಾಸವಾಗಿ ಹೋಗಿದೆ. ಸರ್ಕಾರಗಳು ಪೂರ್ಣ ಪ್ರಮಾಣ ಯೋಜನೆಯ ಅನುಷ್ಠಾನ ಮಾಡದೇ ಇರುವುದರಿಂದ ಪುನರ್ವಸತಿ ಕೇಂದ್ರಗಳಿಗೆ ಹೋಗಲಾಗದೇ ಇಲ್ಲಿಯೇ ಇರುವುದರಿಂದ ಪ್ರವಾಹ ಬಂದಾಗ 2-3 ತಿಂಗಳು ಸ್ಥಳಾಂತರವಾಗಿ ಮತ್ತೆ ಹಳೆಯ ಸ್ಥಾನಕ್ಕೆ ಮರಳಿ ಬರುತ್ತಾರೆ.

ಕೆಲ ಸರ್ಕಾರಗಳು ಪ್ರತಿವರ್ಷ ಪ್ರವಾಹ ಪೀಡಿತರಿಗೆ ಪರಿಹಾರ ಕೊಡುವ ಸಂಪ್ರದಾಯ ಹಾಕಿಕೊಂಡು ಬಂದಿವೆ. ಇನ್ನೂ ಕೆಲ ಸರ್ಕಾರಗಳು ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ಕೆಲ ಸಮಯ ಜಾನುವಾರುಗಳಿಗೆ ಮೇವು ಮತ್ತು ಆಹಾರ ಒದಗಿಸುತ್ತವೆ. ಅಂತೂ ಮಳೆಗಾಲ ಬಂತೆಂದರೆ ಪ್ರವಾಹ ಮತ್ತು ಪರಿಹಾರದ ಚರ್ಚೆಗಳು ಪ್ರಾರಂಭವಾಗಿ ರಾಜಕೀಯ ನಾಯಕರು ಹೇಳಿಕೆಗಳನ್ನು ಕೊಟ್ಟು ಮರೆತು ಬಿಡುವುದು ವಾಡಿಕೆ. ಆದರೆ, ಪ್ರವಾಹದಲ್ಲಿ ಕೊಚ್ಚಿದ ಹೋದ ಜನರ ಬದುಕು ಆ ದೇವರಿಗೆ ಪ್ರೀತಿ ಎನ್ನುವಂತಾಗಿರುತ್ತದೆ.

---

ಬಾಕ್ಸ್‌....

ಬದುಕು ಕಟ್ಟಿಕೊಳ್ಳುವುದೇ ಚಿಂತೆ

ನೆರೆಯ ಆತಂಕ ಇನ್ನೂ ಮುಗಿದಿಲ್ಲ. ಆಗಲೇ 23 ಗ್ರಾಮಗಳಲ್ಲಿ ನೆರೆ ಬಂದು ಬದುಕು ಬೀದಿಗೆ ಬಿದ್ದಿದೆ. ಸುವ್ಯವಸ್ಥಿತವಾಗಿದ್ದ ಮನೆಗಳಿಗೆ ಇದೀಗ ನೀರು ನುಗ್ಗಿ ಹಾಳಾಗಿವೆ. ಜಾನುವಾರುಗಳ ಶೆಡ್‌ಗಳು ಮುಗುಚಿ ಬಿದ್ದಿವೆ. ಕೂಡಿಟ್ಟ ದವಸ ಧಾನ್ಯಗಳು ನೀರು ಪಾಲಾಗಿವೆ. ಇದೀಗ ನೆರೆ ಬಂದ ಊರುಗಳಲ್ಲಿ ನೋವಿನ ನಾದವೇ ಕೇಳಿಸುತ್ತಿದೆ. ಹೀಗಾಗಿ ಸಾಕಷ್ಟು ಹಾನಿಯಾಗಿರುವ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬ ಚಿಂತೆ ಅಲ್ಲಿಯ ಜನರನ್ನು ಕಾಡಲಾರಂಭಿಸಿದೆ.

---

ಕೋಟ್‌.....

ಜಮಖಂಡಿ ತಾಲೂಕಿನ 23 ಗ್ರಾಮಗಳಲ್ಲಿ ಕಾಳಜಿ ಕೇಂದ್ರ ವ್ಯವಸ್ಥೆ ಮಾಡಲಾಗಿದೆ. ರೈತರು ಅಲ್ಲಿಗೆ ಬರುತ್ತಿಲ್ಲವಾದ್ದರಿಂದ ಕೇಂದ್ರಗಳು ಪ್ರಾರಂಭವಾಗಿಲ್ಲ. ಮುತ್ತೂರು, ಕಂಕಣವಾಡಿ, ತುಬಚಿ, ಸನಾಳ, ಶಿರಗುಪ್ಪಿಗಳಲ್ಲಿ ಮೇವು ವಿತರಿಸಲಾಗುತ್ತಿದೆ. ರೈತರು ಬಂದರೇ ಕಾಳಜಿ ಕೇಂದ್ರಗಳು ಪ್ರಾರಂಭವಾಗುತ್ತವೆ. ಅಲ್ಲದೇ ನೋಡಲ್‌ ಅಧಿಕಾರಿಗಳು ಸ್ಥಳದಲ್ಲಿದ್ದು ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

-ಸದಾಶಿವ ಮಕ್ಕೊಜಿ, ತಹಸೀಲ್ದಾರ್‌