ಬಸವಣ್ಣನ ಹೆಸರಲ್ಲಿ ಫಲಪುಷ್ಪ ಪ್ರದರ್ಶನಆಯೋಜನೆ ಶ್ಲಾಘನೀಯ: ನಟ ಅಶೋಕ್‌

| Published : Jan 28 2024, 01:17 AM IST

ಬಸವಣ್ಣನ ಹೆಸರಲ್ಲಿ ಫಲಪುಷ್ಪ ಪ್ರದರ್ಶನಆಯೋಜನೆ ಶ್ಲಾಘನೀಯ: ನಟ ಅಶೋಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ಬಸವಣ್ಣ ಥೀಮ್‌ನ ಫಲಪುಷ್ಪ ಪ್ರದರ್ಶನಕ್ಕೆ ನಟ ಅಶೋಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಗಜ್ಯೋತಿ ಬಸವಣ್ಣ ಅವರ ಹೆಸರಿನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಶ್ಲಾಘನೀಯ. ಈ ಫಲಪುಷ್ಪ ಪ್ರದರ್ಶನಕ್ಕೆ ಸಾಕ್ಷಿಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಹಿರಿಯ ಕಲಾವಿದ ಅಶೋಕ್‌ ಬಣ್ಣಿಸಿದರು.

ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ‘ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ’ದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶನಿವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಚಿಕ್ಕವರಿದ್ದಾಗಿನಿಂದಲೂ ನಾವು ಬಸವಣ್ಣನವರ ವಚನಗಳನ್ನು ಕೇಳುತ್ತಾ ಬೆಳೆದವರು. ಅಂತಹ ಬಸವಣ್ಣನವರ ಕುರಿತು ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ಪೂರ್ವ ಜನ್ಮದ ಪುಣ್ಯವಾಗಿದೆ. ಲಾಲ್‌ಬಾಗ್‌ಗೆ ಮೊದಲ ಸಲ ನನ್ನ ತಂದೆ ಉತ್ತರ ಕರ್ನಾಟಕದಿಂದ ಕರೆದುಕೊಂಡು ಬಂದಾಗ ಪುಳಕಿತನಾಗಿದ್ದೆ. 1983ರಲ್ಲಿ ‘ಕ್ರಾಂತಿಯೋಗಿ ಬಸವಣ್ಣ’ ಚಲನಚಿತ್ರದಲ್ಲಿ ಬಸವಣ್ಣನ ಪಾತ್ರದಲ್ಲಿ ಅಭಿನಯಿಸಿದ ನಂತರ ನನ್ನ ಜೀವನದಲ್ಲಿ ಕ್ರಾಂತಿಯೇ ಆಯಿತು. ಚಲನಚಿತ್ರ ಕಾರ್ಮಿಕರ ಸಂಘದ ಚುಕ್ಕಾಣಿ ಹಿಡಿಯುವ ಅದೃಷ್ಟ ನನ್ನದಾಯಿತು ಎಂದರು.

ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಬಸವಣ್ಣನವರ ಜೀವನ ಆಧರಿಸಿ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಬಹಳ ಸಂತಸ ತಂದಿದೆ. ಲಕ್ಷಾಂತರ ಜನರು ಆಗಮಿಸಿ ಬಸವಣ್ಣವರ ಜೀವನದ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾರೆ. ಆಯೋಜಕರ ಕಾರ್ಯ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆಗಳು, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಪ್ರಬಂಧ ಸ್ಪರ್ಧೆ, ಒಣ ಹೂವಿನ ಜೋಡಣೆ ಮತ್ತಿತರ ವಿಭಾಗಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.ಇಂದು ಕೊನೆಯ ದಿನ

ಲಕ್ಷಾಂತರ ಜನರು ಆಗಮಿಸಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ಜ.28ರಂದು ಕೊನೆಯ ದಿನವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್‌.ರಮೇಶ್‌ ತಿಳಿಸಿದರು.