ಸಾರಾಂಶ
ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ರನ್ನರ್ ಅಪ್ । ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಸ್ಕೂಲ್‌ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ 67ನೇ ರಾಷ್ಟ್ರ ಮಟ್ಟದ 19 ವರ್ಷದೊಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ಹರಿಯಾಣ ಬಾಲಕ - ಬಾಲಕಿಯರ ತಂಡಗಳು ವಿಜೇತರಾದರು. ರಾಜ್ಯ ಸರ್ಕಾರ ಹಾಗೂ ಶಾಲಾ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ದೇಶದ 29 ರಾಜ್ಯಗಳಿಂದ 29 ಬಾಲಕರ ತಂಡ ಹಾಗೂ 28 ಬಾಲಕಿಯರ ತಂಡಗಳು ಭಾಗವಹಿಸಿದ್ದವು.
ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡ ಮತ್ತು ಬಾಲಕರ ವಿಭಾಗದಲ್ಲಿ ವಿದ್ಯಾಭಾರತಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ರಾಜಸ್ಥಾನ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.ಬಾಲಕಿಯರ ವಿಭಾಗದಲ್ಲಿ ಛತ್ತೀಸ್‌ಘಡ ತಂಡ 4ನೇ ಸ್ಥಾನ, ಪಶ್ಚಿಮ ಬಂಗಾಳ ತಂಡ 5ನೇ ಸ್ಥಾನ, ಹಿಮಾಚಲ ಪ್ರದೇಶ 6ನೇ ಸ್ಥಾನ, ದೆಹಲಿ 7ನೇ ಸ್ಥಾನ ಮತ್ತು ತಮಿಳುನಾಡು 8ನೇ ಸ್ಥಾನ ಪಡೆದುಕೊಂಡರು.
ಬಾಲಕರ ವಿಭಾಗದಲ್ಲಿ ದೆಹಲಿ ತಂಡ 4ನೇ ಸ್ಥಾನ, ಕರ್ನಾಟಕ ತಂಡ 5ನೇ ಸ್ಥಾನ, ಸಿಬಿಎಸ್‌ಇ ವೆಲ್‌ಫೇರ್ ಸ್ಟೊರ್ಟ್ಸ್ ಸಂಸ್ಥೆ ತಂಡ 6ನೇ ಸ್ಥಾನ, ಹಿಮಾಚಲಪ್ರದೇಶ ತಂಡ 7ನೇ ಸ್ಥಾನ ಮತ್ತು ಮಹಾರಾಷ್ಟ್ರ ತಂಡ 8ನೇ ಸ್ಥಾನ ಪಡೆದುಕೊಂಡಿತು.ಬಾಲಕಿಯರ ವಿಭಾಗದ ಕರ್ನಾಟಕ ಮತ್ತು ಹರಿಯಾಣ ತಂಡದ ನಡುವಿನ ಫೈನಲ್ ಪಂದ್ಯ ರೋಚಕವಾಗಿತ್ತು. ಪ್ರತಿ ಹಂತದಲ್ಲಿಯೂ ಕ್ರೀಡಾಪಟುಗಳಿಗೆ ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಪ್ರೇಕ್ಷರು ಚಪ್ಪಾಳೆ ಶಿಳ್ಳೆ ಹೊಡೆದು ಹುರಿದುಂಬಿಸಿದರು. ಕರ್ನಾಟಕ ತಂಡದ ಅಮೂಲ್ಯ ದಾಳಿಗಿಳಿಯುತ್ತಿದ್ದಂತೆ ಇಡೀ ಕ್ರೀಡಾಂಗಣದಲ್ಲಿ ಘೋಷಣೆಗಳು ಮೊಳಗಿದವು.
-------------27ಕೆಎಂಎನ್ ಡಿ31
ಆದಿಚುಂಚನಗಿರಿ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಬಾಲಕಿಯರ ವಿಭಾಗದ ಕರ್ನಾಟಕ ಮತ್ತು ಹರಿಯಾಣ ತಂಡದ ನಡುವಿನ ಫೈನಲ್ ಪಂದ್ಯ.