ಸಾರಾಂಶ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ, ಮಗಳನ್ನು ಉಳಿಸಿ ಮಗಳನ್ನು ಓದಿಸಿ ಸಹಿ ಸಂಗ್ರಹಣ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಹಾವೇರಿಹೆಣ್ಣು ಮಕ್ಕಳನ್ನು ಉಳಿಸುವ ಕೆಲಸವಾಗುತ್ತಿದೆ, ಓದಿಸುವ ಕೆಲಸವಾಗಬೇಕು. ಪಾಲಕರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಅವರ ಆಸೆಗಳಿಗೆ ನಿರ್ಬಂಧ ಹಾಕಬಾರದು ಹಾಗೂ ಅವರಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಗಳನ್ನು ಉಳಿಸಿ ಮಗಳನ್ನು ಓದಿಸಿ ಸಹಿ ಸಂಗ್ರಹಣ ಅಭಿಯಾನಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಮಹಿಳೆಯರು ರಾಷ್ಟ್ರಪತಿ, ಪ್ರಧಾನಿ, ಸಚಿವೆ, ವೈದ್ಯೆ, ಕ್ರೀಡಾಪಟು ಹೀಗೆ ಹಲವಾರು ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಸಾಧ್ಯವಾದದ್ದು ಯಾವುದೂ ಇಲ್ಲ, ವಿದ್ಯಾರ್ಥಿನಿಯರು ಸಾಧನೆಗೆ ಮನಸ್ಸು ಮಾಡಬೇಕು. ಹೆಣ್ಣುಮಕ್ಕಳ ಕನಸುಗಳನ್ನು ನಾವೆಲ್ಲರೂ ನನಸು ಮಾಡೋಣ ಎಂದರು.
ಬಳಿಕ ಅಕ್ಷಯ್ ಶ್ರೀಧರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಮಾತನಾಡಿ, ಮಹಿಳೆ ಮನೆಯ ಆಧಾರಸ್ತಂಭವಿದ್ದಂತೆ. ಶಾಲೆಯಲ್ಲಿ ಮಹಿಳಾ ಉಪಾಧ್ಯಾಯರಿದ್ದರೆ ಆ ಶಾಲೆ ಚೆನ್ನಾಗಿ ನಡೆಯುತ್ತದೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ, ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಡಾ. ಬಿ.ಆರ್. ರಂಗನಾಥ್ ಮಾತನಾಡಿ, ಮಾತೃದೇವೋಭವ, ತಾಯಿಯೇ ದೇವರು ಎಂಬುದು ನಮ್ಮ ಸಂಸ್ಕೃತಿ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಗಂಡು ಮಗು ವಂಶೋದ್ಧಾರಕ ಎಂಬ ತಪ್ಪು ಕಲ್ಪನೆಯಿಂದ ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ಆರ್ಥಿಕ, ಸಾಮಾಜಿಕ ಅನಕ್ಷರತೆಯಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಲಿಂಗ ಅಸಮಾನತೆಯ ಮನೋಧರ್ಮ ಬದಲಾಗಬೇಕು. ಗಂಡು-ಹೆಣ್ಣು ಎಂಬ ಭೇದ-ಭಾವ ಮಾಡದೇ ಇಬ್ಬರನ್ನು ಸಮಾನವಾಗಿ ಕಾಣಬೇಕು. ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಗೌರವಿಸಿದರೆ ಲಿಂಗಾನುಪಾತದ ವ್ಯತ್ಯಯ ತೊಡೆದು ಹಾಕಲು ಶ್ರಮಿಸೋಣ ಎಂದರು.ಮಕ್ಕಳಿಗೆ ಹೊಸಬಟ್ಟೆ ವಿತರಣೆ:
ಜ. ೨೪ರಂದು ಜನಿಸಿದ ಹೆಣ್ಣು ಮಕ್ಕಳ ಜನ್ಮ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ, ಮಕ್ಕಳಿಗೆ ಹೊಸ ಬಟ್ಟೆ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ೨೦೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು, ರಾಜ್ಯ ಮಟ್ಟದ ತ್ರಿವಿಧ ಜಿಗಿತದಲ್ಲಿ ಭಾಗವಹಿಸಿದ ರಾಣಿಬೆನ್ನೂರು ಸರ್ಕಾರಿ ಬಾಲಕಿಯರ ಬಾಲ ಮಂದಿರದ ಪೂಜಾ ಹೊಂಬಳ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ನೂರರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾದ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಜೋಶಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣಾ ಸಂಗಳದ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಎಸ್. ಮಜೀದ್ ಉಪಸ್ಥಿತರಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೋಮನಗೌಡ ಗಾಳಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ ವಂದಿಸಿದರು.