ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳೆದ ಭಾನುವಾರ ಬರೋಬ್ಬರಿ 3 ಗಂಟೆ ಕಾಲ ಆಗಸದಲ್ಲೇ ಸುತ್ತಾಡಿ ಆತಂಕ ಸೃಷ್ಟಿಸಿದ್ದ ಫ್ಲೈ-91 ವಿಮಾನ ಮಂಗಳವಾರ ರಾತ್ರಿ ಮತ್ತೆ ಒಂದು ಗಂಟೆಗೂ ಅಧಿಕ ಕಾಲ ಆಗಸದಲ್ಲೇ ಸುತ್ತಾಡಿದೆ. ಈಗಲೂ ಹವಾಮಾನ ವೈಪರೀತ್ಯವೇ ಕಾರಣ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಆದರೆ, ಉಳಿದ ವಿಮಾನಗಳಿಗೆ ಆಗದ ಹವಾಮಾನ ಸಮಸ್ಯೆ ಈ ಸಂಸ್ಥೆಯ ವಿಮಾನಕ್ಕಷ್ಟೇ ಏಕೆ? ಎಂಬ ಪ್ರಶ್ನೆ ಸಾರ್ವಜನಿಕರದ್ದು. ಕಾರ್ಯಾರಂಭ ಮಾಡಿದ 6 ದಿನದಲ್ಲಿ ಎರಡನೇ ಬಾರಿ ಆತಂಕ ಸೃಷ್ಟಿಸಿದೆ.

ಆಗಿದ್ದೇನು?:

ಮಂಗಳವಾರ ಸಂಜೆ ಫ್ಲೈ-91 ವಿಮಾನ ಬೆಂಗಳೂರಿನಿಂದ ಹೊರಟು 8.20ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಮಳೆ ಇದ್ದ ಕಾರಣ ಲ್ಯಾಂಡ್‌ ಆಗದೆ, ಆಗಸದಲ್ಲೇ ಒಂದು ಗಂಟೆಗೂ ಅಧಿಕ ಕಾಲ ಸುತ್ತಿದೆ. ಬಳಿಕ 9.30ಕ್ಕೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಇದೇ ವೇಳೆ 6.50ಕ್ಕೆ ಬೆಂಗಳೂರು ಬಿಟ್ಟಿದ್ದ ಇಂಡಿಗೋ ವಿಮಾನ ಹುಬ್ಬಳ್ಳಿಯಲ್ಲಿ 8.10ಕ್ಕೆ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಜತೆಗೆ 8.50ಕ್ಕೆ ಇಲ್ಲಿಂದ ಸುರಕ್ಷಿತವಾಗಿ ಟೇಕಾಫ್‌ ಕೂಡ ಆಗಿದೆ. ಅದಕ್ಕೆ ಆಗದ ಹವಾಮಾನ ವೈಪರೀತ್ಯ ಫ್ಲೈ-91ಕ್ಕಷ್ಟೇ ಏಕೆ ಎಂಬ ಪ್ರಶ್ನೆ ಸಾರ್ವಜನಿಕಲ್ಲಿ ಮೂಡಿದೆ.