ಫ್ಲೈ ಓವರ್ ಕಾಮಗಾರಿ: ಕಬ್ಬಿಣದ ಪೈಪ್‌ ಬಿದ್ದು ಎಎಸ್‌ಐ ಗಂಭೀರ ಗಾಯ

| Published : Sep 11 2024, 01:05 AM IST

ಫ್ಲೈ ಓವರ್ ಕಾಮಗಾರಿ: ಕಬ್ಬಿಣದ ಪೈಪ್‌ ಬಿದ್ದು ಎಎಸ್‌ಐ ಗಂಭೀರ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಉಪನಗರ ಠಾಣೆ ಎಎಸ್‌ಐ ನಾಭಿರಾಜ ದಾಯಣ್ಣವರ ಮೇಲೆ ಫ್ಲೈ ಓವರ್ ಕಾಮಗಾರಿಗೆ ಬಳಸುತ್ತಿದ್ದ ಕಬ್ಬಿಣದ ಪೈಪ್‌ ತಲೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹುಬ್ಬಳ್ಳಿ:

ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದ ವೇಳೆ ಕೆಳ ಮಾರ್ಗವಾಗಿ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದೊಡ್ಡ ಗಾತ್ರದ ಕಬ್ಬಿಣದ ಪೈಪ್ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಇಲ್ಲಿಯ ಹಳೇ ಕೋರ್ಟ್ ವೃತ್ತದ ಬಳಿ ನಡೆದಿದೆ.

ಉಪನಗರ ಠಾಣೆ ಎಎಸ್‌ಐ ನಾಭಿರಾಜ ದಾಯಣ್ಣವರ (59) ಗಾಯಗೊಂಡಿರುವ ಅಧಿಕಾರಿ.

ಇಲ್ಲಿನ ಕೋರ್ಟ್ ವೃತ್ತದ ಬಳಿ ಮಂಗಳವಾರ ಫ್ಲೈಓವರ್‌ಗೆ ಕ್ರೇನ್‌ನಲ್ಲಿ ಇಬ್ಬರು ಕಾರ್ಮಿಕರನ್ನು ನಿಲ್ಲಿಸಿ ಜನರ ಓಡಾಟ ಮತ್ತು ವಾಹನ ಸಂಚಾರ ತಡೆಗಟ್ಟದೇ ಕಬ್ಬಿಣದ ಆ್ಯಂಗ್ಲರ್ ಮತ್ತು ಪೈಪ್ ಜೋಡಣೆ ಮಾಡಲಾಗುತ್ತಿತ್ತು. ಈ ವೇಳೆ ಕೆಳ ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಫ್ಲೈಓವರ್ ಮೇಲಿಂದ ಎಎಸ್‌ಐ ತಲೆ ಮೇಲೆ ಕಬ್ಬಿಣದ ಪೈಪ್ ಬಿದ್ದಿದೆ. ಇದರಿಂದ ಹೆಲ್ಮೆಟ್ ಒಡೆದು ತಲೆಗೆ ಪೆಟ್ಟಾಗಿ ಮೆದುಳಿಗೆ ತೀವ್ರ ಗಾಯವಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ದಾಖಲಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಕಾರ್ಮಿಕರ ಕೈಯಿಂದ ಜಾರಿ ಬಿದ್ದಿದ್ದೆಯೋ ಅಥವಾ ಫೈಓವರ್ ಮೇಲೆ ಇಟ್ಟಿದ್ದ ಪೈಪ್ ಬಿದ್ದಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸಿಪಿ ಶಿವಪ್ರಕಾಶ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಘಟನೆ ಬಗ್ಗೆ ಸ್ಥಳೀಯವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಆಸ್ಪತ್ರೆಗೆ ತೆರಳಿ ಪೊಲೀಸ್ ಅಧಿಕಾರಿ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿ, ಇದು ಮೇಲ್ನೋಟಕ್ಕೆ ಗುತ್ತಿಗೆದಾರನ ನಿರ್ಲಕ್ಷ್ಯ ಕಂಡು ಬಂದಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಹಿಂದೆಯೂ ಘಟನೆ ನಡೆದಿತ್ತು:

ಈ ಹಿಂದೆಯೂ ಇದೇ ವೃತ್ತದ ಬಳಿ ಫ್ಲೈಓವರ್ ಮೇಲ್ಭಾಗಕ್ಕೆ ಕ್ರೇನ್ ಮೂಲಕ ಭಾರವಾದ ವಸ್ತು ಸಾಗಿಸುತ್ತಿದ್ದ ವೇಳೆಯೂ ದೊಡ್ಡ ಅನಾಹುತ ಸಂಭವಿಸಿತ್ತು. ಭಾರವಾದ ವಸ್ತು ಸಾಗಿಸುತ್ತಿದ್ದ ವೇಳೆ ಕ್ರೇನ್ ಮುರಿದು ಬಿದ್ದ ಪರಿಣಾಮ ಪಕ್ಕದ ಕಟ್ಟಡ ಮತ್ತು ವಿದ್ಯುತ್ ಪ್ರಸರಣ ಇರುವ ನಾಲ್ಕೈದು ಕಂಬಕ್ಕೆ ಹಾನಿ ಉಂಟಾಗಿತ್ತು. ಆದರೆ, ಆಗ ಅದೃಷ್ಟವಶಾತ ಎನ್ನುವಂತೆ ಹಲವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.