ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಹನಗಳ ಸುಗಮ ಸಂಚಾರಕ್ಕೆ ನಿರ್ಮಿಸಿರುವ ಫ್ಲೈಓವರ್‌ಗಳು ಮಳೆ ಬಂದಾಗ ಜಲಾವೃತಗೊಂಡು ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟು ಮಾಡುವ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗುತ್ತಿವೆ.ಸೋಮವಾರ ಸಂಜೆ ಸುರಿದ ಮಳೆಗೆ ನಗರದ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ವೀರಣ್ಯ ಪಾಳ್ಯ ಫ್ಲೈಓವರ್‌ನಲ್ಲಿ ಭಾರಿ ಪ್ರಮಾಣದ ನೀರು ನಿಲುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಗವಾರದಿಂದ ಮಹದೇವಪುರವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೈರಾಣಾದರು. ಅದೇ ರೀತಿ ನಗರದ ಅತಿ ಉದ್ದದ ಫ್ಲೈಓವರ್‌ಗಳಲ್ಲಿ ಒಂದಾಗಿರುವ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಕೂಡ ಮಳೆ ಬಂದಾಗ ಅಲ್ಲಲ್ಲಿ ನೀರು ನಿಲ್ಲುತ್ತದೆ.
ಜಲಪಾತವೇ ಸೃಷ್ಟಿ: ಇನ್ನು ತುಮಕೂರು ರಸ್ತೆಯ ಫ್ಲೈಓವರ್‌ನ ಟಿ. ದಾಸರಹಳ್ಳಿ ಬಳಿ ಪ್ರತಿ ಬಾರಿ ಮಳೆ ಬಂದಾಗಲೂ ಜಲಪಾತ ಸೃಷ್ಟಿಯಾಗುತ್ತಿದೆ. ಫ್ಲೈಓವರ್‌ನಿಂದ ಜಲಪಾತದಂತೆ ಸುರಿಯುವ ನೀರು ಕೆಳಗೆ ಸಂಚರಿಸುವ ವಾಹನಗಳ ಬೀಳುತ್ತದೆ. ವಿಡಿಯೋ ಮಾಡುವ ಸಾರ್ವಜನಿಕರು ಇದು ‘ಜೋಗ ಜಲಪಾತ ಅಲ್ಲ. ದಾಸರಹಳ್ಳಿ ಜಲಪಾತ’ ಎಂದು ವ್ಯಂಗ್ಯ ಮಾಡಿ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ.ಅದೇ ರೀತಿ ಮೈಸೂರು ರಸ್ತೆಯ ಸಿರ್ಸಿ ಫ್ಲೈಓವರ್, ನಾಯಂಡಹಳ್ಳಿ ಫ್ಲೈಓವರ್ ಮೇಲೂ ನೀರು ನಿಲ್ಲುತ್ತದೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್ ಮೇಲೆ ಮಳೆ ಬಂದಾಗ ಅಲ್ಲಲ್ಲಿ ನೀರು ನಿಲ್ಲುವ ಕುರಿತು ಸಾರ್ವಜನಿಕರು ದೂರು ಹೇಳಿಕೊಂಡಿದ್ದಾರೆ.
ಪೈಪ್‌ಗಳಲ್ಲಿ ಕಸ ತೆರವುಗೊಳಿಸಬೇಕು: ಫ್ಲೈಓವರ್ ಮೇಲಿನ ನೀರು ಹರಿದು ನೇರವಾಗಿ ಒಳಚರಂಡಿಗೆ ಹರಿದು ಹೋಗಲು ಪೈಪ್‌ಲೈನ್ ವ್ಯವಸ್ಥೆ ಇರುತ್ತದೆ. ಆದರೆ, ಪೈಪ್‌ಲೈನ್‌ಗಳ ಒಳಗೆ ತುಂಬಿಕೊಂಡಿರುವ ಕಸವನ್ನು ತೆರವುಗೊಳಿಸದ ಕಾರಣ ನೀರು ಸರಿಯಾಗಿ ಹರಿಯುವುದಿಲ್ಲ. ಅನೇಕ ಬಾರಿ ನೀರು ಹರಿದು ಹೋಗಲು ಇರುವ ಡ್ರೈನ್‌ಗಳ ಬಳಿಯೇ ಅಪಾರ ತ್ಯಾಜ್ಯ ತುಂಬಿರುತ್ತದೆ. ಅದನ್ನು ತೆರವುಗೊಳಿಸಲು ಪಾಲಿಕೆಗಳು, ಫ್ಲೈಓವರ್ ನಿರ್ವಹಿಸುವ ಸಂಸ್ಥೆಗಳು ನಿರ್ಲಕ್ಷ್ಯ ತೋರುವ ಕಾರಣ ನೀರು ತುಂಬಿಕೊಂಡು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಧೀರ್ಘಾವಧಿಯಲ್ಲಿ ಮಳೆ ನೀರು ನಿಂತುಕೊಂಡರೇ ಫ್ಲೈಓವರ್‌ಗಳ ದುರ್ಬಲಗೊಳ್ಳುವ ಆತಂಕವೂ ಇರುತ್ತದೆ. ಹೀಗಾಗಿ, ಫ್ಲೈಓವರ್‌ಗಳ ಮೇಲೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಫ್ಲೈಓವರ್ ಕೆಳಗೆ ಸಿಡಿಯುವ ನೀರು
ಮಳೆ ನಿಂತರು, ಮಳೆ ನೀರು ಹರಿದು ಹೋಗದ ಕಾರಣ ಅಕ್ಕ-ಪಕ್ಕದಲ್ಲಿ ಓಡಾಡುವ ದ್ವಿಚಕ್ರ ವಾಹನಗಳು, ಕಾರುಗಳಿಗೆ ನೀರು ಸಿಡಿಯುತ್ತದೆ. ಕೆಲವೊಮ್ಮೆ ಬೃಹತ್ ವಾಹನಗಳು ವೇಗವಾಗಿ ಸಂಚರಿಸಿದಾಗ ಫ್ಲೈಓವರ್ ಮೇಲಿನ ನೀರು ಕೆಳಗೆ ಓಡಾಡುವವರ ಮೇಲೂ ಸಿಡಿಯುತ್ತದೆ.