ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಗಮನ ಹರಿಸಿ: ಸಿದ್ರಾಮೇಶ್ವರ

| Published : Nov 11 2024, 11:50 PM IST

ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಗಮನ ಹರಿಸಿ: ಸಿದ್ರಾಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಜಿಲ್ಲೆಯ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯ ಹಿರೇಬೆಣಕಲ್ ಗ್ರಾಮದ ಮೋರೆರ ಬೆಟ್ಟವು ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಇದರ ರಕ್ಷಣೆ ಹಾಗೂ ಅಭಿವೃದ್ಧಿ ಜೊತೆಗೆ ಜಿಲ್ಲೆಯಲ್ಲಿರುವ ಇತರೆ ಸ್ಮಾರಕಗಳನ್ನು ಗುರುತಿಸಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತಾಗಲಿ. ನಗರದ ಗವಿಮಠ ಹಾಗೂ ಮಳೆಮಲ್ಲೇಶ್ವರ ಬೆಟ್ಟದಲ್ಲಿರುವ ಅಶೋಕನ ಶಿಲಾಶಾಸನಕ್ಕೆ ಹೋಗಲು ಕಡಿದಾದ ದಾರಿ ಇದ್ದು, ಇದನ್ನು ಸಂಪರ್ಕಿಸಲು ರಸ್ತೆ ಕಲ್ಪಿಸಬೇಕು. ಅಲ್ಲಲ್ಲಿ ಮಾರ್ಗ ಮಧ್ಯೆ ಶಿಲಾಶಾಸನದ ಮಾಹಿತಿ ಫಲಕ ಅಳವಡಿಕೆ ಮಾಡಬೇಕು. ಮಳೆ, ಗಾಳಿಯಿಂದ ಶಿಲಾಶಾಸನಕ್ಕೆ ಧಕ್ಕೆ ಆಗದ ರೀತಿ ರಕ್ಷಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳಿ. ಕನಕಗಿರಿಯ ವೆಂಕಟಪ್ಪ ಬಾವಿ, ಪುಷ್ಕರಣಿಗಳು ಸೇರಿದಂತೆ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಪಟ್ಟಿ ಮಾಡಿ, ಅವುಗಳನ್ನು ಸಂರಕ್ಷಿತ ತಾಣಗಳೆಂದು ಘೋಷಣೆ ಮಾಡಲು ಕ್ರಮ ವಹಿಸಬೇಕು. ಜಿಲ್ಲೆಯ ಪ್ರವಾಸಿ ತಾಣಗಳನ್ನು ಕೊಪ್ಪಳ ಬ್ರ್ಯಾಂ ಡ್ ಯೋಜನೆಯಡಿ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.

ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ ಈ ಪ್ರವಾಸಿ ತಾಣಗಳಿಗೆ ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಿಗರು ಸೇರಿ ಅಪಾರ ಜನಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಇಂತಹ ಸ್ಥಳಗಳ ಅಭಿವೃದ್ಧಿ ಜೊತೆಗೆ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಇಕೋ ಟೂರಿಸಂಗೆ ಹೆಚ್ಚು ಒತ್ತು ನೀಡುವುದು ಅವಶ್ಯಕವಾಗಿದೆ. ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ. ಕೊಪ್ಪಳದ ಹುಲಿಕೆರೆ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರ ಪ್ರದೇಶದಲ್ಲಿ ಸುಂದರವಾದ ಬೆಟ್ಟಗುಡ್ಡಗಳಿದ್ದು, ರಾಕ್ ಕ್ಲೈಬಿಂಗ್, ಸ್ಲ್ಯಾಕ್ ಲೈನ್ ಮುಂತಾದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ. ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.