ಸಾರಾಂಶ
ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ವಿದ್ಯಾಪೋಷಕ್ ನಿಧಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉದ್ಯಮ ಕ್ಷೇತ್ರದಲ್ಲಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಎದೆಗುಂದಬಾರದು. ಶಿಕ್ಷಣದ ನಂತರ ಕೇವಲ ಕೈ ತುಂಬಾ ಸಂಬಳ ಬರುವ ಉದ್ಯೋಗಗಳನ್ನಷ್ಟೇ ಅಪೇಕ್ಷೆ ಪಡದೆ, ನೂರಾರು ಜನರಿಗೆ ಉದ್ಯೋಗ ನೀಡುವ ಉದ್ಯಮ ಕ್ಷೇತ್ರದ ಕಡೆಗೆ ಆಸಕ್ತಿ ವಹಿಸಿ ಎಂದು ಗ್ಲೋಬಲ್ ಸಾರಸ್ವತ್ ಚೇಂಬರ್ ಆಫ್ ಎಂಟ್ರಪ್ರಿನರ್ಸ್ ನಿರ್ದೇಶಕಿ, ಲೆಕ್ಕಪರಿಶೋಧಕಿ ಪ್ರತಿಕ್ಷಾ ಪೈ ನಾಯಕ್ ಹೇಳಿದರು.ಅವರು ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ, ಮುದರಂಗಡಿ ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಇಲ್ಲಿನ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾದ ವಿದ್ಯಾಪೋಷಕ್ ನಿಧಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಗ್ಲೋಬಲ್ ಸಾರಸ್ವತ್ ಚೇಂಬರ್ ಆಫ್ ಎಂಟ್ರಪ್ರಿನರ್ಸ್ ಆಯೋಜನೆಯಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣ ವೇದಿಕೆ ಮತ್ತು ತ್ರಿಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಥಮ ಹಂತದಲ್ಲಿ 25 ಮಂದಿ ಜಿಎಸ್‌ಬಿ ಯುವಜನತೆಗೆ ಉದ್ಯಮಶೀಲತೆಯ ಯೋಜನೆ, ಉತ್ಪಾದನೆ, ಮಾರ್ಕೆಟಿಂಗ್, ವೆಂಚರ್ ಕ್ಯಾಪಿಟಲ್, ಸಾಲ ಸೌಲಭ್ಯ ಮತ್ತು ಬ್ರಾಂಡಿಂಗ್ ಬಗ್ಗೆ ಐದು ದಿನಗಳ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದವರು ಮಾಹಿತಿ ನೀಡಿದರು.ಈ ಸಭೆಯ ಅಧ್ಯಕ್ಷತೆಯನ್ನು ಅನಂತ ವೈದಿಕ ಕೇಂದ್ರದ ಪ್ರವರ್ತಕ ರಾಮಚಂದ್ರ ಅನಂತ ಭಟ್ ವಹಿಸಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರಯುತ ನಡವಳಿಕೆ, ಗುರು ಹಿರಿಯರಲ್ಲಿ ಶ್ರದ್ಧಾಭಕ್ತಿ, ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕಿವಿಮಾತು ಹೇಳಿದರು.ಮಂಗಳೂರಿನ ಕಾಮತ್ ವೆಂಚರ್ಸ್ ಸಂಸ್ಥಾಪಕ ಗುರುದತ್ತ ಕಾಮತ್, ಆಂಧ್ರಪ್ರದೇಶ ನಂದ್ಯಾಲದ ಜಿಎಸ್‌ಬಿ ಸಮಾಜದ ಸಂಚಾಲಕ ರಘುವೀರ್ ಶೆಣೈ ನಂದ್ಯಾಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಿಎಸ್‌ಬಿ ಸಮಾಜದ ಹಿತರಕ್ಷಣಾ ವೇದಿಕೆಯ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ಯೋಜನೆಯ ಅಧ್ಯಕ್ಷ ಎಸ್.ಎಸ್.ನಾಯಕ್, ಜಿಎಸ್‌ಬಿ ವೇದಿಕೆ ಅಧ್ಯಕ್ಷ ಜಿ. ಸತೀಶ್ ಹೆಗ್ಡೆ ಕೋಟ, ಸಂಯೋಜಕ ಆರ್. ವಿವೇಕಾನಂದ ಶೆಣೈ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))