ಸಾರಾಂಶ
ಗದಗ: ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿ ಕಾಲೇಜುಗಳಲ್ಲಿ ಉತ್ತಮ ಮೂಲಭೂತ ಸೌಲಭ್ಯ ಹೊಂದಿದ್ದೇವೆ, ಆದರೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರತಿಯೊಬ್ಬರೂ ಗಮನ ನೀಡಬೇಕು ಎಂದು ಕಾನೂನು, ಸಂಸದೀಯ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ ಆಡಿಟೋರಿಯಂ ಹಾಲ್ ನಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಪೂ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯ ಪ್ರೌಢ ಶಾಲಾ ಮುಖ್ಯಸ್ಥರು ಹಾಗೂ ಕಾಲೇಜು ಪ್ರಾಂಶುಪಾಲರ ಸಭೆ ಉದ್ಘಾಟಿಸಿ ಮಾತನಾಡಿದರು.ಶೈಕ್ಷಣಿಕ ಮಟ್ಟ ಎತ್ತರಿಸಲು ಇನ್ನು ಅವಶ್ಯವಿರುವ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತದೆ. ಆದರೆ ಎಲ್ಲ ಸೌಲಭ್ಯಗಳಿದ್ದರೂ ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಏರಿಕೆ ಕಾಣದೇ ಇರುವುದಕ್ಕೆ ಕಾರಣವೇನು ಎನ್ನುವುದನ್ನು ಪ್ರತಿಯೊಬ್ಬರೂ ಪರಾಮರ್ಶೆ ಮಾಡಿಕೊಳ್ಳಬೇಕಿದೆ.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರಿಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಮೂಲಭೂತ ಸಮಸ್ಯೆ ಇತ್ಯರ್ಥ ಪಡಿಸುವುದು, ಆ ಮೂಲಕ ಶೈಕ್ಷಣಿಕ ಮಟ್ಟ ಸುಧಾರಣೆ ಮಾಡುವುದು ಈ ಸಭೆಯ ಉದ್ದೇಶವಾಗಿದೆ. ಇಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಬಿಚ್ಚು ಮನಸ್ಸಿನಿಂದ ನಿಮ್ಮ ಸಮಸ್ಯೆ ಹೇಳಿ, ನೀವು ಯಾರನ್ನೂ ಮೆಚ್ಚಿಸಲು ಸತ್ಯವನ್ನು ಮುಚ್ಚಿಟ್ಟು ಸುಳ್ಳನ್ನು ಹೇಳಿದರೆ ಅದನ್ನು ಸಹಿಸುವುದಿಲ್ಲ. ಜಿಲ್ಲೆಯ ಶಾಲೆಗಳಲ್ಲಿ ಶೌಚಾಲಯಗಳ ಬಳಕೆ ಸರಿಯಾಗಿ ಆಗುತ್ತಿಲ್ಲ, ತೀರಾ ಅವ್ಯವಸ್ಥೆಯಿಂದ ಕೂಡಿವೆ ಎನ್ನುವ ಬಗ್ಗೆ ನನಗೆ ಹಲವಾರು ಜನರು ವಾಸ್ತವ ಸ್ಥಿತಿ ತಿಳಿಸಿದ್ದಾರೆ. ಇದರ ಸುಧಾರಣೆಗೆ ಹಿರಿಯ ಅಧಿಕಾರಿಗಳು ಗಮನ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲೆಯಲ್ಲಿ ಕಟ್ಟಡವೇ ಇಲ್ಲದ,ನಿವೇಶನಗಳೇ ಇಲ್ಲದೇ ಇರುವಂತಾ ಒಟ್ಟು 5 ಶಾಲೆಗಳು ಸೇರಿದಂತೆ ಒಟ್ಟು 12 ಸರ್ಕಾರಿ ಶಾಲೆಗಳಿಗೆ ಆಗಷ್ಟ ಅಂತ್ಯದೊಳಗೆ ಜಾಗಾ ಗುರುತಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು. ನ.14 ರೊಳಗೆ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಕೂಡಾ ಪ್ರಾರಂಭವಾಗಬೇಕು ಇದಕ್ಕೆ ಬೇಕಾಗುವ ಅಗತ್ಯ ಕ್ರಮ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಬೇಕು. ಇದಕ್ಕೆ ಅಗತ್ಯ ಬಿದ್ದರೆ ಸರ್ಕಾರದ ಹಂತದಲ್ಲಿಯೂ ನಾನು ಪ್ರಯತ್ನಿಸುತ್ತೇನೆ ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಕುರಿತು ಗಮನ ಹರಿಸಬೇಕು. ಪಿಯು ವಿದ್ಯಾರ್ಥಿಗಳ ದಾಖಲಾತಿ ಸಮರ್ಪಕವಾಗಿದ್ದು, ಹಾಜರಾತಿ ಮಾತ್ರ ಕಡಿಮೆ ಇದ್ದಲ್ಲಿ ಅಂತಹ ಪಿಯು ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಜರಾತಿಯ ಕಡೆ ನಿಗಾ ವಹಿಸಬೇಕು ಎಂದು ಸೂಚಿಸಿದರು.ಡಿಡಿಪಿಐ ಎಂ.ಎ. ರಡ್ಡೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಉನ್ನತೀಕರಿಸುವಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಚಿಂತನೆ ಮಾಡುವ ಅಗತ್ಯತೆಯಿದೆ. ಆದ ಕಾರಣ ಶಿಕ್ಷಕರನ್ನು ಒಂದು ಕಡೆ ಸೇರಿಸಿ ಅವರ ಅಭಿಪ್ರಾಯ ಒಗ್ಗೂಡಿಸಿ ಫಲಿತಾಂಶ ಸುಧಾರಣೆಗಾಗಿ ಸಭೆ ಆಯೋಜಿಸಲಾಗಿದೆ. ದೆಹಲಿ ಶಾಲೆಗಳ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡ ತೆರಳಿ ಅಲ್ಲಿನ ಮಾಹಿತಿ ಪಡೆಯಲಾಗಿದೆ ಎಂದರು.
ಸಭೆಯಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಾಲಾ ಮುಖ್ಯಸ್ಥರು ತಮ್ಮ ತಮ್ಮ ಶಾಲೆ ಕಾಲೇಜು ಸ್ವಂತ ಜಾಗದ, ಕಟ್ಟಡದ ಸಮಸ್ಯೆ, ಮೂಲಭೂತ ಸೌಲಭ್ಯಗಳ ಸಮಸ್ಯೆ, ಮೈದಾನ ಸೌಲಭ್ಯ, ಬೋಧಕ ಸಿಬ್ಬಂದಿಗಳ ಕೊರತೆ ಹೀಗೆ ಹಲವು ಮಾಹಿತಿ ಸಭೆಯಲ್ಲಿ ಸಚಿವ ಎಚ್.ಕೆ. ಪಾಟೀಲ ಪಡೆದುಕೊಂಡರು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ಮುಖ್ಯಸ್ಥರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಓ ಭರತ್.ಎಸ್, ಡಯಟ್ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕುರ್ತಕೋಟಿ ಸೇರಿದಂತೆ ತಾಲೂಕು ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರು, ಶಿಕ್ಷಣ ತಜ್ಞರು ಹಾಜರಿದ್ದರು.ಬೇಸರ: ಜಿಲ್ಲೆಯ 8 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎನ್ನುವುದು ಸಭೆಯಲ್ಲಿ ಗೊತ್ತಾಗುತ್ತಿದ್ದಂತೆ ಸಚಿವರು ಆಶ್ಚರ್ಯ ವ್ಯಕ್ತಪಡಿಸಿ,ಇದರ ಬಗ್ಗೆ ಕೂಡಲೇ ಗಮನ ಹರಿಸಲು ಸೂಚಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರೌಢ ಶಾಲಾ ಮುಖ್ಯೋಪಾಧ್ಯಯರು ಸಚಿವರು ಕೇಳುತ್ತಿದ್ದ ಪ್ರಶ್ನೆಯೇ ಬೇರೆ, ಅದಕ್ಕೆ ಅವರು ಉತ್ತರ ಕೊಡುತ್ತಿದ್ದದ್ದ ಬೇರೆ, ಇದರಿಂದ ಕುಪಿತಗೊಂಡ ಸಚಿವ ಎಚ್.ಕೆ. ಪಾಟೀಲ ನೀನ್ ಸಾಕ್ ಕುತ್ಕೋಳಪ್ಪ, ಎಲ್ಲ ಪ್ರಶ್ನೆಗೂ ಉತ್ತರಿಸಿದರ ಮಾರ್ಕ್ಸ ಕೊಡುವುದಿಲ್ಲ ಎಂದು ನಗೆ ಚಟಾಕಿ ಮೂಲಕವೇ ಗದರಿದ್ದಲ್ಲದೇ, ಅಲ್ರೀ ಡಿಡಿಪಿಐ ಅವ್ರೇ.. ನಾನ್ ಕೇಳುದೇನ್.. ಅವ್ರು ಹೇಳುದೇನು... ಹಿಂಗಾದ್ರ್ ಹ್ಯಾಂಗ್.. ಎಂದು ಬೇಸರ ವ್ಯಕ್ತ ಪಡಿಸಿದ ಘಟನೆಯೂ ನಡೆಯಿತು.
ಪ್ರಸಕ್ತ ವರ್ಷದ ಶೈಕ್ಷಣಿಕ ಪ್ರಾರಂಭದ ಹಂತದಲ್ಲಿಯೇ ಮಹತ್ವದ ಬದಲಾವಣೆ ಮಾಡುವ ಮೂಲಕ ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಣೆಗೆ ಕ್ರಮ ವಹಿಸಲಾಗಿದೆ. ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ಕ್ರಮ ಕೈಗೊಳ್ಳಲು ಒಂದು ಸಮೀಕ್ಷೆಯ ತಂಡವನ್ನು ದೆಹಲಿ ರಾಜ್ಯಕ್ಕೆ ಅಲ್ಲಿನ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯಗಳ ಸ್ಥಿತಿಗತಿಗಳ ಕುರಿತು ಅವಲೋಕಿಸಲು ಕಳುಹಿಸಲಾಗಿತ್ತು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.ಅಧಿಕಾರಿಗಳಿಗೆ ಚುರುಕು:
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ ಕೊನೆ ಸ್ಥಾನ ಪಡೆದಿತ್ತು. ಅಂದು ಕನ್ನಡಪ್ರಭ ಈ ಕುರಿತು ವಿಶೇಷ ವರದಿ ಪ್ರಕಟಸಿದ್ದಲ್ಲದೇ ಸಚಿವರ ನಿರ್ಲಕ್ಷ್ಯಬಗ್ಗೆ ಗಮನ ಸೆಳೆದಿತ್ತು. ಅದಕ್ಕೆ ಸ್ಪಂದಿಸಿರುವ ಸಚಿವ ಎಚ್.ಕೆ.ಪಾಟೀಲ ಈ ಕುರಿತು ಸೋಮವಾರ ವಿಶೇಷ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ, ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.