ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟಿಸಿ ತಾಲೂಕು ಪಂಚಾಯಿತಿ ಇ ಒ ಅವರಿಗೆ ಮನವಿ ಸಲ್ಲಿಸಿದರು.ಮೊಳಕಾಲ್ಮುರು ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮನವಿ ಸಲ್ಲಿಸಿದ ಕಾರ್ಯಕರ್ತರು, ತಾಲೂಕಿನ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇಲ್ಲದೇ ಹಳ್ಳಿಗಳಲ್ಲಿ ಸೊಳ್ಳೆಗಳು ಹೆಚ್ಚಿ ಜನರು ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾದಂತಹ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸ್ವಚ್ಛತೆ ಕಾಪಡಬೇಕಾದ ಗ್ರಾಮ ಪಂಚಾಯಿತಿ ನಿರ್ಲಕ್ಷ ತೋರಿದ್ದಾರೆ. ಬಹುತೇಕ ಚರಂಡಿ, ರಸ್ತೆಗಳು ಗಬ್ಬು ನಾರುತ್ತಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.
ಗ್ರಾಮೀಣ ಭಾಗದ ಬಹುತೇಕ ಹಳ್ಳಿಗಳಲ್ಲಿ ಹಗಲು ವಿದ್ಯುತ್ ದೀಪಗಳು ಉರಿಯುತ್ತಿವೆ. ಇದರಿಂದ ಲಕ್ಷಾಂತರ ರೂ ನಷ್ಟವಾಗುತ್ತಿದೆ. ಬೀದಿ ದೀಪಗಳಿಗೆ ಕಂಟ್ರೋಲರ್ ಹಾಕಬೇಕಾದ ಪಂಚಾಯಿತಿಯವರು ಗಮನ ಹರಿಸುತ್ತಿಲ್ಲ. ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ವಿದ್ಯುತ್ ಬಿಲ್ ವ್ಯಾಯವಾಗುತ್ತಿರುವ ಪರಿಣಾಮ ಹಳ್ಳಿಗಳ ಅಭಿವೃದ್ಧಿಗೆ ತೊಡಕಾಗಿದೆ ಎಂದು ಆರೋಪಿಸಿದ್ದಾರೆ.ಹಳ್ಳಿಗಳಲ್ಲಿ ವಿದ್ಯುತ್ ಉಳಿತಾಯವಾಗುವಂತಹ ಬಲ್ಪ್ ಗಳನ್ನು ಅಳವಡಿಸಬೇಕು. ಹಗಲಲ್ಲಿ ಉರಿಯುವ ವಿದ್ಯುತ್ ಕಂಬಗಳಿಗೆ ಕಂಟ್ರೋಲರ್ ಹಾಕಿ ವಿದ್ಯುತ್ ಉಳಿತಾಯ ಮಾಡಿ, ರೈತರ ಕೃಷಿ ಪಂಪ್ ಸೆಟ್ ಗಳಿಗೆ ನೀಡಬೇಕು. ಪ್ರತಿ ಹಳ್ಳಿಗಳಲ್ಲಿ ಚರಂಡಿ ಸ್ವಚ್ಛಗೊಳಿಸುವ ಜತಗೆ ಬ್ಲೀಚಿಂಗ್ ಪಿನಾಯಿಲ್ ಹಾಕಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಜಮೀನುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಇಂಗು ಗುಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಪ್ರತಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಜತೆಗೆ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಮಂಜುನಾಥ, ಪೂಜಾರ ಹಟ್ಟಿ ನಾಗರಾಜ, ಸೂಲೇನಹಳ್ಳಿ ತಿಪ್ಪೇಸ್ವಾಮಿ, ಕೋನಸಾಗರ ಗುರಪ್ಪ, ನೆರ್ಲಹಳ್ಳಿ ನಾಗೇಶ್, ಕಾಮಯ್ಯ, ಮೂರ್ತಿ, ತಿಪ್ಪಿರನ ಹಟ್ಟಿ ಚಂದ್ರಣ್ಣ, ಮೇಸ್ತ್ರಿ ಪಾಪಯ್ಯ,ವೀರಣ್ಣ, ಕೆ.ಎಂ. ನಾಗರಾಜ, ಸಣ್ಣಪ್ಪ ಇದ್ದರು.