ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾರತಾಂಬೆ ನೆಲವು ಗೋವಿನ ಸಂತತಿಯ ರಾಷ್ಟ್ರವಾಗಿತ್ತು. ಕ್ರೂರಿಗಳಿಂದ ಇತ್ತೀಚಿನ ದಿನಗಳಲ್ಲಿ ಗೋ ಜೊಲ್ಲು ಬೀಳುವ ನೆಲದಲ್ಲಿ ಗೋರಕ್ತ ಬೀಳುವಂತಾಗಿದೆ. ಇದರಿಂದ ಭಾರತಾಂಬೆಗೆ ನೋವುಂಟಾಗಿದ್ದು, ಹಿಂದೂಗಳ ಧಾರ್ಮಿಕ ಪ್ರಜ್ಞೆಯಾಗಿರುವ ಗೋವಿನ ಸಂತತಿ ಸಂರಕ್ಷಿಸುವತ್ತ ನಮ್ಮ ಗಮನ ನೀಡಬೇಕು ಎಂದು ಆರ್‌ಎಸ್‌ಎಸ್‌ನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ಪ್ರಮುಖ ಸಂಚಾಲಕ ಅರುಣಕುಮಾರಜೀ ಒತ್ತಿ ಹೇಳಿದರು.ಶನಿವಾರ ಸಂಜೆ ಬನಹಟ್ಟಿಯ ಶ್ರೀಕಾಡಸಿದ್ಧೇಶ್ವರ ದೇವಸ್ಥಾನದ ಕುಸ್ತಿ ಮೈದಾನದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತಿ, ಕಾಯಕ, ಭಾಷೆ, ಆಹಾರ, ಉಡುಗೆ ಸೇರಿದಂತೆ ಏನೇ ಇರಲಿ ಅವೆಲ್ಲವನ್ನು ಒಂದು ಹಂತಕ್ಕೆ ಮರೆತು ಮೂಲದಲ್ಲಿ ನಾವೆಲ್ಲ ಹಿಂದೂ ಎಂಬುದನ್ನು ಮರೆಯಬಾರದು. ಜಾತಿ ನೆಪದಲ್ಲಿ ಏಕತೆ ಒಡೆಯುವ ಭಯಾನಕ ಸಂಗತಿಗಳಾಗುತ್ತಿವೆ. ಇದರಿಂದ ದೂರ ಉಳಿದು ಹಿಂದೂ ರಾಷ್ಟ್ರಕ್ಕಾಗಿ ಸಂಕಲ್ಪಿತರಾಗಿ ಒಗ್ಗಟ್ಟು ಪ್ರದರ್ಶಿಸಿ ವಿಧ್ವಂಸಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.ಜಗತ್ತಿನಲ್ಲಿ ಇಸ್ಲಾಂ ಹಾಗೂ ಕ್ರೈಸ್ತರು ಮತಾಂತರ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಲೇ ಇದೆ. ಇದ್ಯಾವುದಕ್ಕೂ ಜಗ್ಗದೆ ನಮ್ಮ ಸನಾತನ ಧರ್ಮದ ಮೂಲಕ ಹಿಂದೂ ಸಂಸ್ಕೃತಿ ಉಳಿಸಿ-ಬೆಳೆಸುವ ಕಾರ್ಯವಾಗಬೇಕು. ಲವ್ ಜಿಹಾದ್’ ಮೂಲಕ ಶತ್ರುಗಳು ನಮ್ಮ ಮನೆ ಅಂಗಳದಲ್ಲಿಯೇ ಬರುತ್ತಿದ್ದಾರೆ. ಇಂಥವರ ಮೇಲೆ ಎಚ್ಚರದಿಂದ ಇದ್ದು, ಮಕ್ಕಳಿಗೆ ಸದೃಢ ಮಾನಸಿಕತೆ, ನಮ್ಮ ಸಂಸ್ಕೃತಿಗಳನ್ನು ಪ್ರೀತಿಯಿಂದ ಕಲಿಸಿ, ನಮ್ಮತನದಲ್ಲೇ ಬೆಳೆಸಬೇಕಾದ ಕರ್ತವ್ಯ ಪ್ರತಿಯೊಬ್ಬ ತಂದೆ-ತಾಯಿಯದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಶೈಲ ಗೊಂಬಿ ಮಾತನಾಡಿ, ಪ್ರತಿಯೊಬ್ಬ ಹಿಂದೂ ಒಗ್ಗಟ್ಟಾಗುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು. ಪೂರ್ವಿಕರ ಶ್ರಮ ಬಲಿದಾನದಿಂದಾಗಿ ಸನಾತನ ಹಿಂದೂ ಧರ್ಮವು ಇನ್ನೂ ಜೀವಂತವಿದೆ. ಅದರ ಪಾಲನೆ ಮಾಡಬೇಕಾದದ್ದು ಎಲ್ಲರ ಕರ್ತವ್ಯ ಎಂದರು.ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಘದ ಮಹಿಳಾ ಪ್ರತಿನಿಧಿ ಸಾವಿತ್ರಿ ಚಂದ್ರಶೇಖರ ಕಾಡದೇವರ ಉಪಸ್ಥಿತರಿದ್ದರು. ಬ್ರಿಜ್‌ಮೋಹನ ಚಿಂಡಕ, ಶಿವಾನಂದ ಗಾಯಕವಾಡ, ಸೋಮು ಗೊಂಬಿ, ಸಂಜಯ ತೆಗ್ಗಿ, ಈಶ್ವರ ನಾಗರಾಳ, ಮೋಹನ ಪತ್ತಾರ, ಸಂಗಮೇಶ ಪಾಟೀಲ, ಬಸವರಾಜ ತೆಗ್ಗಿ, ಡಾ.ಶಂಕರ ವಸ್ತ್ರದ, ಡಾ.ಸಂಗಮೇಶ ಹತಪಾಕಿ, ಗಿರೀಶ ಕಾಡದೇವರ, ಸದಾಶಿವ ತಟಕೋಟ, ರಾಮಣ್ಣ ಭದ್ರನ್ನವರ, ಶಂಕರ ಜಾಲಿಗಿಡದ ಸೇರಿದಂತೆ ಅನೇಕ ಹಿರಿಯರು ಭಾಗವಹಿಸಿದ್ದರು.----------