ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ವಾರ್ಷಿಕ ಪರೀಕ್ಷೆಗಳಿಗೆ ಇನ್ನು ಕೆಲವೇ ದಿನಗಳು ಉಳಿದಿದ್ದು ವಿದ್ಯಾರ್ಥಿಗಳು ಈಗಿನಿಂದಲೇ ವಿಷಯವಾರು ವಿಷಯಕ್ಕೆ ಆದ್ಯತೆಯನ್ನು ನೀಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.ತಾಲೂಕಿನ ಕೌದಳ್ಳಿ ಗ್ರಾಮದ ಶಾದಿ ಮಹಲ್ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಹನೂರು ತಾಲೂಕು ವತಿಯಿಂದ 2023-2024 ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಆಯೋಜಿಸಲಾಗಿದ್ದ ಭರವಸೆ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ತಂದೆ ತಾಯಿಗಳ ತ್ಯಾಗ, ಶಿಕ್ಷಕರ ಶ್ರಮ ಮತ್ತು ಮಾರ್ಗದರ್ಶನವನ್ನು ಅರಿತು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪಟ್ಟಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾದ ಪರಿಸರ ವಾತಾವರಣವನ್ನು ಹೊಂದಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರಕೃತಿಯನ್ನೇ ಶಕ್ತಿಯನ್ನಾಗಿಸಿ ಮುನ್ನುಗ್ಗಬೇಕು. ಬರೆದಿರುವುದನ್ನು ಓದಿ, ಓದಿದ್ದನ್ನು ಮನನ ಮಾಡಿಕೊಂಡು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಬೇಕು. ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಪ್ರಬುದ್ಧತೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯಗಾರಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ನನ್ನ ಮೊದಲ ಆದ್ಯತೆ ಶಿಕ್ಷಣ, ಆರೋಗ್ಯ, ರೈತ ಆಗಿದ್ದು, ಶಿಕ್ಷಣ ಇಲಾಖೆಗೆ ಬೇಕಾದ ಸಹಕಾರವನ್ನು ನಾನು ಸದಾ ಒದಗಿಸುತ್ತೇನೆ ಎಂದರು.ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ಭರವಸೆ:ಶಾಸಕ ಎಂ.ಆರ್.ಮಂಜುನಾಥ್ ವಿನೂತನ ಆಲೋಚನೆಯಲ್ಲಿ ಮೂಡಿ ಬಂದಿರುವ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ದಿಸೆಯಲ್ಲಿ ಆಯೋಜಿಸಲಾಗಿದ್ದ ಭರವಸೆ ತುಂಬುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಿಂದ ನಮಗೆ ನಿಜಕ್ಕೂ ಸ್ಫೂರ್ತಿ, ಧೈರ್ಯ ಆತ್ಮವಿಶ್ವಾಸ ಮೂಡಿದೆ ಖಂಡಿತ ನಾವು ಉತ್ತಮ ಫಲಿತಾಂಶ ತಂದು ನಾವು ಓದಿದ ಶಾಲೆ, ಕಾಲೇಜು, ಶಿಕ್ಷಕರು, ತಂದೆ ತಾಯಿ, ನಿಮ್ಮೆಲ್ಲರಿಗೂ ಕೀರ್ತಿ ತರುತ್ತೇವೆ ಎಂದು ಭರವಸೆ ನೀಡಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೆ ಅರಸು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು, ಶಿಕ್ಷಣ ಸಂಯೋಜಕ ಕಿರಣ್ ಕುಮಾರ್, ಕಂದವೇಲು ಸಿ.ಆರ್.ಪಿ.ಗಳಾದ ಅನಿಲ್ ಕುಮಾರ್, ಷಣ್ಮುಗಂ ದೇವರಾಜು ಮತ್ತು ಮುನಿರಾಜು, ಕೌದಳ್ಳಿ ಕ್ಲಸ್ಟರ್ನ ಪ್ರೌಢಶಾಲೆಯ ಮುಖ್ಯ ಶಿಕ್ಷಕರುಗಳಾದ ಕಾಂತರಾಜು ಶಿವಶಂಕರ್, ಸಿದ್ದರಾಜು, ಸಗಯಮೇರಿ ಇನ್ನು ಮುಂತಾದವರು ಹಾಜರಿದ್ದರು.