ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ ಚಿಕ್ಕ ಮಕ್ಕಳಿಂದಲೇ ವಿದ್ಯೆಯೊಂದಿಗೆ ಸಮಾಜದಲ್ಲಿ ಉತ್ತಮ ಸಂಸ್ಕಾರದೊಂದಿಗೆ ಬಾಳುವ ಪ್ರಜೆಯಾಗಿ ಬೆಳೆಸುವುದು ಉತ್ತಮ ಶಿಕ್ಷಕನ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ತೋವಿನಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪಿ.ಎಂ,ಶ್ರೀ ಕಲರವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮಕ್ಕಳನ್ನು ಉತ್ತಮ ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡುವ ಶಿಕ್ಷಕರ ಜವಾಬ್ದಾರಿಯೊಂದಿಗೆ ಅಷ್ಟೇ ಜವಾಬ್ದಾರಿ ತಂದೆ-ತಾಯಿಯರ ಜವಾಬ್ದಾರಿಯಾಗಿದೆ. ಪೋಷಕರು ಮಕ್ಕಳ ಶೈಕ್ಷಣಿಕ ಆಭಿವೃದ್ದಿಯ ಕಡೆ ಹೆಚ್ಚು ಗಮನ ಹರಿಸಬೇಕು. ತೋವಿನಕೆರೆಯ ಈ ಸರ್ಕಾರಿ ಶಾಲೆಯ ರೀತಿ ನೋಡಿದರೆ ಪ್ರತಿ ವರ್ಷ ಪ್ರಗತಿಯಾಗುತ್ತಿದ್ದು ಸುತ್ತಮುತ್ತಲ ಗ್ರಾಮದ ಪೋಷಕರಿಗೆ ಈ ಶಾಲೆಯ ಅಭಿವೃದ್ಧಿ ಬಗ್ಗೆ ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಇಂದಿನ ದಿನ ಮಾನಸಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದ್ದು, ಆದರೆ ತೋವಿನಕೆರೆ ಶಾಲೆಯಲ್ಲಿ ಮಾತ್ರ ಮಕ್ಕಳ ಹಾಜರಾತಿ ಹೆಚ್ಚಾಗುತ್ತಿದೆ, ಇದಕ್ಕೆ ಶಾಲೆಯಲ್ಲಿ ಉತ್ತಮ ವಾತಾವರಣ, ಶಿಕ್ಷಕರ ಕರ್ತವ್ಯ ಪ್ರಜ್ಞೆಯೋಂದಿಗೆ ಶಾಲೆಯ ಎಸ್‌ಡಿಎಂಸಿ ಹಾಗೂ ಪೋಷಕರ ಸಹಕಾರ ದೊರೆತಿರುವುದೇ ಕಾರಣ ಎಂದರು. ಸರ್ಕಾರಿ ಶಾಲೆಗಳನ್ನು ಪೋಷಕರು ಪ್ರೀತಿಸಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಾಣಬಹುದಾಗಿದೆ. ಈ ಶಾಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದೆ ವಿಜೃಂಭಣೆಯ ವರ್ಣರಂಜಿತ ಕಾರ್ಯಕ್ರಮ ಮಾಡಿಸಿ ತಮ್ಮ ಮಕ್ಕಳ ಪ್ರತಿಭೆ ಹೊರ ತರುವಲ್ಲಿ ಆಯೋಜನೆ ರೂಪಿಸಿರುವ ಕಾರ್ಯಕ್ರಮವಾಗಿ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ.ಹನುಮಂತರಾಯಪ್ಪ ಮಾತನಾಡಿ, ತೋವಿನಕೆರೆ ಸರ್ಕಾರಿ ಶಾಲೆಯ ಶಿಕ್ಷಕರ ಉತ್ತಮ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳ ಹಾಜರಾತಿಯಲ್ಲಿ ತಾಲೂಕಿನಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಸುತ್ತಮುತ್ತಲ ಗ್ರಾಮಸ್ಥರ ಮತ್ತು ಎಸ್.ಡಿ,ಎಂ.ಸಿ ಸದಸ್ಯರ ಹಾಗೂ ಶಿಕ್ಷಕರ ಪರಿಶ್ರಮ ಎದ್ದು ಕಾಣುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯ ಕಾರ್ಯಕ್ರಮ ವೀಕ್ಷಿಸಲು ಬಂದಿರುವ ತಮಗೆ ಶಿಕ್ಷಕರ ಸಂಘದ ಪರವಾಗಿ ಅಭಿನಂದಿಸುತ್ತೆ, ಇಲ್ಲಿನ ಶಿಕ್ಷಕರ ಒಗಟ್ಟು, ಕಾರ್ಯದಕ್ಷತೆಯನ್ನು ಪ್ರಶಂಶಿಸಿ ಪಿ.ಎಂ.ಶ್ರೀ ಯೋಜನೆ ಈ ಶಾಲೆಗೆ ವರದಾನವಾಗಿ ಬಂದಿದ್ದು ಇಲ್ಲಿನ ಎಸ್.ಡಿ.ಎಂ.ಸಿ ಮತ್ತು ಶಿಕ್ಷಕರು ಒಟ್ಟಾಗಿ ಕೆಲಸ ಮಾಡಿ ಮಾದರಿ ಶಾಲೆಯ ಹೆಸರನ್ನು ಶಾಶ್ವತವಾಗಿ ಉಳಿಸಲು ಸಲಹೆ ನೀಡಿದರು. ಕಾರ್ಯಕ್ರಮದ ಎಸ್.ಡಿ.ಎಂ.ಸಿ ಅಧ್ಯಕ್ಷ ಟಿ.ಎ.ಮಂಜುನಾಥ್, ಶಿಕ್ಷಣ ಸಂಯೋಜಕ ಕಾಮರಾಜು, ಶಾಲೆಯ ಮುಖ್ಯಶಿಕ್ಷಕ ಎಸ್.ಬಿ.ಸಿದ್ದಪ್ಪ, ಗ್ರಾ.ಪಂ. ಅಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಸುಧಾನಾಗರಾಜು, ನರಸಮ್ಮ, ಪತ್ರಕರ್ತ ಹೇಮಂತ್, ಶ್ರೀನಿವಾಸ, ರೇವಣ್ಣ, ಮೂರ್ತಿ, ಪುಪ್ಪಲತ, ವಸಂತ, ಶ್ವೇತ, ತಿಮ್ಮಾಜಮ್ಮ, ಶಬಾನ, ಜಯಲಕ್ಷ್ಮಿ, ಲಕ್ಷ್ಮೀದೇವಮ್ಮ, ಕರೀಂಸಾಬ್, ಸಿದ್ದಲಿಂಗಯ್ಯ, ಸಿದ್ದರಾಜು, ರವಿ, ಶ್ರೀನಿವಾಸ್, ಹನುಮಂತರಾಜು, ಅನಸೂಯಮ್ಮ, ಶಿಕ್ಷಕರಾದ ರಂಗನಾಥ್, ಧನಂಜಯ, ಶಿವಣ್ಣ, ನಾಗರಾಜನಾಯ್ಕ, ರತ್ನಾದೇವಿ, ಶೈಲ, ನಾಗವೇಣಿ, ಲೇಪಾಕ್ಷಿ ಸೇರಿದಂತೆ ಇತರರು ಇದ್ದರು.