ಜಾನಪದ ಸಂಸ್ಕೃತಿ ಗ್ರಾಮೀಣ ಭಾಗದ ಪ್ರತೀತಿ : ಸೂರಿ ಶ್ರೀನಿವಾಸ್

| Published : Feb 12 2025, 12:33 AM IST

ಜಾನಪದ ಸಂಸ್ಕೃತಿ ಗ್ರಾಮೀಣ ಭಾಗದ ಪ್ರತೀತಿ : ಸೂರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಶಾಲಾ ಮಕ್ಕಳಿಗೆ ಪದ್ಯಗಳ ಕಲಿಕೆಯೊಟ್ಟಿಗೆ ಜಾನಪದ ಸೊಗಡಿನ ಗೀತೆಗಳನ್ನು ಶಿಕ್ಷಕರು ರೂಢಿಸಿದರೆ, ಭವಿಷ್ಯದಲ್ಲಿ ಜಾನಪದ ಸಂಸ್ಕೃತಿ ಬೆಳವಣಿಗೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಜಾನಪದ ಕಲೆಗಳ ಉಚಿತ ತರಬೇತಿ ಶಿಬಿರ, ಮುಗುಳುವಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶಾಲಾ ಮಕ್ಕಳಿಗೆ ಪದ್ಯಗಳ ಕಲಿಕೆಯೊಟ್ಟಿಗೆ ಜಾನಪದ ಸೊಗಡಿನ ಗೀತೆಗಳನ್ನು ಶಿಕ್ಷಕರು ರೂಢಿಸಿದರೆ, ಭವಿಷ್ಯದಲ್ಲಿ ಜಾನಪದ ಸಂಸ್ಕೃತಿ ಬೆಳವಣಿಗೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ತಾಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕ ದಿಂದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ಧ ಜಾನಪದ ಕಲೆಗಳ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಅನಕ್ಷರತೆ ಕಾಲಘಟ್ಟದಲ್ಲಿ ನಮ್ಮ ಪೂರ್ವಿಕರು ಕಾಯಕದ ಪರಿಶ್ರಮ ಮರೆಯಲು ಹಾಗೂ ಸಮಯ ಮುಂದೂಡಲು ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ತದನಂತರ ಬಾಯಿಂದ, ಬಾಯಿಗೆ ಹರಡುವ ಮೂಲಕ ಜಾನಪದ ಗೀತೆಗಳು ಪ್ರಸಿದ್ಧಿ ಹೊಂದಿ ಸ್ಥಾನಮಾನ ದೊರೆಯಲು ಪೂರ್ವಿಕರ ಶ್ರಮವೇ ನೇರ ಕಾರಣ ಎಂದರು.ಜಾನಪದ ಗೀತೆಗಳಿಗೆ ಹಿಂದಿನ ಕಾಲದಲ್ಲಿ ಅಕ್ಷರವಿರಲಿಲ್ಲ. ಕೇವಲ ಆಡು ಭಾಷೆಯಲ್ಲೇ ಗೀತೆಗಳಿತ್ತು. ಇಂದಿಗೂ ಚಿತ್ರದುರ್ಗ ಜಿಲ್ಲೆಯ ವೃದ್ಧೆರೊಬ್ಬರು ಕಂಠದಲ್ಲಿ ಸಾವಿರಕ್ಕೂ ಹೆಚ್ಚು ಜಾನಪದ ಗೀತೆಗಳು ಆಳವಾಗಿ ನೆಲೆಸಿರುವುದು ಸಾಮಾನ್ಯ ವಿಚಾರವಲ್ಲ. ಹೀಗಾಗಿ ಜಾನಪದ ಸಂಪ್ರದಾಯ ಅಳಿಯದಂತೆ ಕಾಪಾಡಬೇಕು ಎಂದು ಹೇಳಿದರು.ಈ ಹಿಂದೆ ವೀರಗಾಸೆ, ಕೋಲಾಟ, ಗಿಲ್ಲಿದಾಂಡು, ಕುಂಟೆಪಿಲ್ಲೇ, ಲಗೋರಿ ಆಟಗಳು ಜಾನಪದ ಪ್ರಕಾರದ ಒಂದು ಭಾಗ ಹಾಗೂ ಗ್ರಾಮೀಣ ಸಂಸ್ಕೃತಿ ಪ್ರತೀತಿ. ಆ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಪುರಾತನ ಆಟೋಟ ಚಟುವಟಿಕೆ ಹಾಗೂ ಜಾನಪದ ಗೀತೆಗಳನ್ನು ಪರಿಚಯಿಸಿದರೆ ಮುಂದಿನ ಯುವ ಪೀಳಿಗೆಗೆ ಜಾನಪದ ಸಂಪತ್ತು ಕೊಂಡೊಯ್ಯಲು ಸಾಧ್ಯ ಎಂದು ತಿಳಿಸಿದರು.ಕಜಾಪ ತಾಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ ಮಾತನಾಡಿ, ಗ್ರಾಮೀಣ ಶಾಲಾ ಮಕ್ಕಳಲ್ಲಿ ಜಾನಪದ ಅರಿವು ಮೂಡಿಸುವ ನಿಟ್ಟಿನಲ್ಲಿ ತರಬೇತಿ ಶಿಬಿರ ಆಯೋಜಿಸಿ ಪ್ರೇರೇಪಿಸಲಾಗುತ್ತಿದೆ. ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ಕೂಲಂಕಶವಾಗಿ ಅರಿತು ಅಭ್ಯಾಸದಲ್ಲಿ ತೊಡಗಿಸಿದರೆ ಮುಂದೆ ರಾಜ್ಯಮಟ್ಟದಲ್ಲಿ ಹೆಸರು ಗಳಿಸಬಹುದು ಎಂದರು.ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಹಾಗೂ ತರಬೇತುದಾರ ಡಾ.ವಿಜಯ್‌ಕುಮಾರ್ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ವ್ಯಾಮೋಹದಿಂದ ರಂಗಗೀತೆ, ಲಾವಣಿ, ಗೀಗೀಪದ, ಸಣ್ಣಾಟ, ನೃತ್ಯ, ಡೊಳ್ಳು ಕುಣಿತ ನಶಿಸುತ್ತಿವೆ. ಹೀಗಾಗಿ ಜಾನಪದ ಸಂಸ್ಕೃತಿ ಮರು ಸೃಷ್ಟಿಸಲು ತಾಲೂಕಿನಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆ ಮುಖ್ಯೋಪಾಧ್ಯಾಯಿನಿ ಎಸ್.ಕೆ. ವಿಜಯಲಕ್ಷ್ಮೀ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಜಾನಪದ ಯುವ ಬ್ರಿಗೇಡ್ ನಗರ ಸಂಚಾಲಕ ಆಮಿತ್ ಆಚಾರ್ಯ, ಗ್ರಾಮೀಣ ಸಂಚಾಲಕ ದಿಲೀಪ್, ಶಾಲಾ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

11 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ಧ ಜಾನಪದ ಕಲೆಗಳ ಉಚಿತ ತರಬೇತಿ ಶಿಬಿರವನ್ನು ಸೂರಿ ಶ್ರೀನಿವಾಸ್‌ ಉದ್ಘಾಟಿಸಿದರು.