ಸಾರಾಂಶ
- ಶ್ವಾಸಕೋಶ ಸೋಂಕಿನಿಂದಾಗಿ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು । ಮೂಲತಃ ಶಿವಮೊಗ್ಗ ಜಿಲ್ಲೆ ಹಾಡೋನಹಳ್ಳಿಯ ಎಂ.ಜಿ.ಈಶ್ವರಪ್ಪ ಶಿಕ್ಷಣ ಕ್ಷೇತ್ರದಲ್ಲಿ 50 ವರ್ಷ ಸೇವೆ
- - - ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಹಾಗೂ ನಿವೃತ್ತ ಪ್ರಾಚಾರ್ಯರಾಗಿದ್ದರು- ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಕಸಾಪ, ಚಿಂದೋಡಿ ಶಂಭುಲಿಂಗಪ್ಪ ಸಂತಾಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಜನಪದ ವಿದ್ವಾಂಸ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಹಾಗೂ ನಿವೃತ್ತ ಪ್ರಾಚಾರ್ಯ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಅವರು ಶನಿವಾರ ಶ್ವಾಸಕೋಶ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ ಬಸಮ್ಮ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ಅಂತ್ಯಕ್ರಿಯೆ ಜೂ.2ರ ಭಾನುವಾರ ದಾವಣಗೆರೆಯಲ್ಲಿ ನಡೆಯಲಿದೆ.ಕಳೆದ ಒಂದು ವಾರದಿಂದ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಈಶ್ವರಪ್ಪ ಅವರು, ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಅಪಾರ ಗಣ್ಯರು, ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ.
ಕಿರು ಪರಿಚಯ:ಮೂಲತಃ ಶಿವಮೊಗ್ಗ ಜಿಲ್ಲೆ ಹಾಡೋನಹಳ್ಳಿಯವರಾದ ಎಂ.ಜಿ.ಈಶ್ವರಪ್ಪ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ರಂಗಭೂಮಿಯ ನಂಟು ಹೊಂದಿದ್ದರು. ಚಂಪಾ ಅವರ ''''''''ಕೊಡೆಗಳು'''''''' ನಾಟಕದಲ್ಲಿ ಅಭಿನಯಿಸಿದ್ದರು. ಅಚ್ಚುಕಟ್ಟು ಕನ್ನಡ ಬಳಕೆ, ಅಪಾರ ಜ್ಞಾನದಿಂದಲೇ ದಾವಣಗೆರೆ ಜನತೆಯ ಮನಗೆದ್ದಿದ್ದರು. ವೈಚಾರಿಕ ಪ್ರಜ್ಞೆವುಳ್ಳವರಾಗಿದ್ದ ಈಶ್ವರಪ್ಪ ಹೆಗ್ಗೋಡಿನ ನೀನಾಸಂ, ಮೈಸೂರಿನ ರಂಗಾಯಣ, ಸಾಣೆಹಳ್ಳಿಯ ಶಿವಸಂಚಾರ ಕಲಾತಂಡಗಳಿಂದ ಸಹಕಾರದೊಂದಿಗೆ ನಾಟಕಗಳನ್ನು ಪ್ರದರ್ಶಿಸಿದ್ದರು. ಎಂ.ಜಿ.ಈಶ್ವರಪ್ಪ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳು ಅರಸಿ ಬಂದಿದ್ದವು.
ಸಂತಾಪ:* ಎಸ್‌ಎಸ್, ಎಸ್‌ಎಸ್‌ಎಂ ತೀವ್ರ ಸಂತಾಪ ದಾವಣಗೆರೆ: ಹಿರಿಯ ಜಾನಪದ ತಜ್ಞ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ.ಎಂ.ಜಿ. ಈಶ್ವರಪ್ಪನವರ ನಿಧನಕ್ಕೆ ಬಾಪೂಜಿ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ಮತ್ತು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಅಥಣಿ ವೀರಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಾ. ಎಂ.ಜಿ . ಈಶ್ವರಪ್ಪ ಅವರು ಕನ್ನಡ ಪ್ರಾಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ಜಾನಪದ, ಬಂಡಾಯ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಸರು ಗಳಿಸಿದ ಅವರ ನಿಧನದಿಂದ ಶೈಕ್ಷಣಿಕ ಕ್ಷೇತ್ರ ಮತ್ತು ಜಾನಪದ ಕ್ಷೇತ್ರ ಬಡವಾದಂತಾಗಿವೆ ಎಂದು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ. ಎಂ.ಜಿ. ಈಶ್ವರಪ್ಪ ನಿಧನದಿಂದ ಅವರ ಕುಟುಂಬ ವರ್ಗ ಮತ್ತು ಅವರ ಶಿಷ್ಯ ಬಳಗಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಅವರುಗಳು ಪ್ರಾರ್ಥಿಸಿದ್ದಾರೆ.- - - * ಕನ್ನಡ ಸಾಹಿತ್ಯ ಪರಿಷತ್ತು ಕಂಬನಿ: ದಾವಣಗೆರೆ: ಜಾನಪದ, ಶಿಕ್ಷಣ, ರಂಗಭೂಮಿ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಡಾ. ಎಂ.ಜಿ. ಈಶ್ವರಪ್ಪ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಕಂಬನಿ ಮಿಡಿದಿದ್ದಾರೆ. ಈಶ್ವರಪ್ಪ ಅವರು ಅವಿಭಜಿತ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಲೋಕಕ್ಕೆ ಗಣನೀಯ ಸೇವೆ ಸಲ್ಲಿಸಿದ್ದರು. 2013 ರಲ್ಲಿ ಹರಿಹರದಲ್ಲಿ ನಡೆದಿದ್ದ 6 ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ನಿಧನವು ಸಾಹಿತ್ಯ ಲೋಕಕ್ಕೆ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಆಘಾತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಾ ಮಾರ್ಗದರ್ಶಕರಾಗಿದ್ದ ಈಶ್ವರಪ್ಪ ಅವರ ಅಗಲುವಿಕೆ ಸಾಹಿತ್ಯ ಪರಿಷತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ದುಃಖವನ್ನು ವ್ಯಕ್ತಪಡಿಸಿದ್ದಾರೆ.
- - - * ರಂಗಭೂಮಿ ಕಲಾವಿದ ಚಿಂದೋಡಿ ಶಂಭುಲಿಂಗಪ್ಪ ಕಂಬನಿ: ದಾವಣಗೆರೆ: ಕನ್ನಡ ರಂಗಭೂಮಿಯ ವಿಮರ್ಶಕ, ನಟ, ಜಾನಪದ ತಜ್ಞರಾದ ಡಾ.ಎಂ.ಜಿ.ಈಶ್ವರಪ್ಪನವರು ಬಿಡುವಿನ ವೇಳೆಯಲ್ಲಿ ರಂಗಭೂಮಿ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದ ಆತ್ಮೀಯ ಮಿತ್ರರಾಗಿದ್ದರು. ಈಶ್ವರಪ್ಪ ನಿಧನದಿಂದ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಶ್ರೀ ಸಂಚಾರಿ ಕೆಬಿಆರ್ ಡ್ರಾಮಾ ಕಂಪನಿ ಮಾಲೀಕರಾದ ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದ್ದಾರೆ.4 ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯ ಚರ್ಚೆ ಮಾಡುತ್ತಿದ್ದ ಒಬ್ಬ ಸೋದರ ಇನ್ನಿಲ್ಲ. 1998ರಲ್ಲಿ ನಾನು ನಾಟಕ ಅಕಾಡೆಮಿ ಸದಸ್ಯನಾದಾಗ ಅವರಿಗೆ ಕರ್ನಾಟಕ ಕರ್ನಾಟಕ ಅಕಾಡೆಮಿ ವತಿಯಿಂದ ನಾಟಕ ಅಕಾಡೆಮಿ ಫೆಲೋಶಿಪ್ ನೀಡಿದಾಗ ಚರ್ಚೆ ಮಾಡಲು ಅವರ ಮನೆಗೆ ಹೋಗಿದ್ದಾಗ ಅವರು ತೋರಿದ ಪ್ರೀತಿ ಸಾಹಿತ್ಯ ಹಾಗೂ ರಂಗಭೂಮಿ ಬಗ್ಗೆ ಚರ್ಚೆ ಇಂದಿಗೂ ಮರೆಯುವ ಹಾಗಿಲ್ಲ ಅವರ ನಿಧನದಿಂದ ದಿಗ್ಭ್ರಮೆಯಾಗಿದೆ ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅವರ ನಿಧನದ ವಾರ್ತೆ ತಡೆದುಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
- - - -1ಕೆಡಿವಿಜಿ38, 39ಃ: ಡಾ. ಎಂ.ಜಿ. ಈಶ್ವರಪ್ಪ