ಜಾನಪದ ಸಂಭ್ರಮ: ಸ್ಥಳೀಯ ಗಾಯಕರಿಗೆ ಹೆಚ್ಚಿನ ಆದ್ಯತೆ

| Published : Jul 30 2024, 12:34 AM IST

ಜಾನಪದ ಸಂಭ್ರಮ: ಸ್ಥಳೀಯ ಗಾಯಕರಿಗೆ ಹೆಚ್ಚಿನ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ: ನಗರದ ಜಿಲ್ಲಾ ಕೇಂದ್ರದಲ್ಲಿ ಜಾನಪದ ಸಂಭ್ರಮ ಮೊದಲ ಕಾರ್ಯಕ್ರಮವನ್ನು ಜು. ೩೧ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ. ಉಮೇಶ್ ಹೇಳಿದರು.

ಚಾಮರಾಜನಗರ: ನಗರದ ಜಿಲ್ಲಾ ಕೇಂದ್ರದಲ್ಲಿ ಜಾನಪದ ಸಂಭ್ರಮ ಮೊದಲ ಕಾರ್ಯಕ್ರಮವನ್ನು ಜು. ೩೧ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ. ಉಮೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿ ಮಾತನಾಡಿ, ಜಿಲ್ಲಾಡಳಿತ, ಜಾನಪದ ಅಕಾಡೆಮಿ ಹಾಗೂ ಆಕಾಶವಾಣಿ ಮೈಸೂರಿ ಎಫ್.ಎಂ ೧೦೦.೬ ಸಹಯೋಗದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಮತಿಗಳ ಕರುಣಿಸೊ ಮಾದೇವ ಎಂಬ ಉಪಶೀರ್ಷಿಕೆಯೊಂದಿಗೆ ಆಯೋಜಿಸಲಾಗಿದೆ. ಜಾನಪದ ತವರೂರು ಎಂದೇ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಮೊಟ್ಟ ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದರು.

ಚಾಮರಾಜನಗರದಿಂದ ಮೊದಲುಗೊಂಡು ಬೀದರ್‌ವರೆಗೆ ಜಾನಪದ ಹಿರಿಮೆಯನ್ನು ಹೆಚ್ಚಿಸುವುದು. ಜಾನಪದ ಮೂಲಪಟ್ಟುಗಳನ್ನು ಹಾಡುವ ಕಲಾವಿದರ ಕುರಿತು ಉತ್ತೇಜನ, ಪ್ರಚಾರ ನೀಡುವ ನಿಟ್ಟಿನಲ್ಲಿ ಅಕಾಡೆಮಿ ಮುಂದಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಗಾಯಕ, ಗಾಯಕಿಯರು ಹೆಚ್ಚಾಗಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆಯನ್ನು ಜಾನಪದ ಸಂಭ್ರಮದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ಜು. ೩೧ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೊನ್ನತೇರು ಹರಿದಾವು ಎಂಬ ವಿಶೇಷ ಶೀರ್ಷಿಕೆಯಡಿ ಏರ್ಪಡಿಸಲಾಗಿರುವ ಮೆರವಣಿಗೆಗೆ ಚಾಲನೆ ನೀಡುವರು. ವೀರಗಾಸೆ, ಗಾರುಡಿ ಗೊಂಭೆ, ಗೊರವರಕುಣಿತ, ಗೊರುಕಾನ ನೃತ್ಯ, ನಗಾರಿ ಮತ್ತು ತಮಟೆ, ಪೂಜಾ ಕುಣಿತ, ಡೊಳ್ಳು ಕುಣಿತ, ಹುಲಿವೇಷ, ಬೀಸು ಕಂಸಾಳೆ, ಬೇಟೆಮಣೆ, ಲಂಬಾಣಿ ನೃತ್ಯ, ಸುಗ್ಗಿ ಕುಣಿತ, ತಮಟೆ ವಾದನ, ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದರು.

ಮಧ್ಯಾಹ್ನ ೧೨ ಗಂಟೆಗೆ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಾನಪದ ಸಂಭ್ರಮದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯ ಸುನೀಲ್ ಬೋಸ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲೆಯ ಶಾಸಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಂಸ್ಕೃತಿ ಚಿಂತಕರು ಡಾ. ಬಂಜಗೆರೆ ಜಯಪ್ರಕಾಶ್ ವರ್ತಮಾನದ ತಲ್ಲಣಗಳು ಮತ್ತು ಜಾನಪದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅವ್ವ ನಿನ್ನ ದನಿ ಅಪರಂಜಿ ಶೀರ್ಷಿಕೆಯಡಿ ಜಿಲ್ಲೆಯ ಮಹಿಳಾ ಕಲಾವಿದರ ತಂಡ ಹಾಡುಗಳನ್ನು ಹಾಡಲಿದ್ದಾರೆ. ಜಿಲ್ಲೆಯ ಜಾನಪದ ಕಲಾವಿದರಿಂದ ಕೋಗಿಲೆ ಕೂಗಿದಾವೋ ಶೀರ್ಷಿಕೆಯಡಿ ಕಾರ್ಯಕ್ರಮ ಮೂಡಿಬರಲಿದೆ ಎಂದರು.

ಮೌಲಿಕ, ತಾತ್ವಿಕ ಸಂದೇಶ ಹೋಗಬೇಕು ಎಂಬ ಆಶಯದೊಂದಿಗೆ ಜಿಲ್ಲಾ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದು ಎಲ್ಲಾ ಕಲಾವಿದರ ಜಿಲ್ಲಾ ಹಬ್ಬವಾಗಿದೆ. ಕಲಾವಿದರ ನೆಲವೀಡು ಚಾಮರಾಜನಗರದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಿ ಉತ್ತೇಜನ ನೀಡಬೇಕು. ಕಲಾವಿದರಿಗೆ ಬೆಂಬಲ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಸಾಹಿತಿ ಸೋಮಶೇಖರ ಬಿಸಲ್ವಾಡಿ, ಹಿರಿಯ ಜಾನಪದ ಕಲಾವಿದರಾದ ಸಿ.ಎಂ. ನರಸಿಂಹಮೂರ್ತಿ, ಮಹೇಶ್, ಲಿಂಗಶೆಟ್ಟಿ ಇದ್ದರು.