ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಖ್ಯಾತ ಜಾನಪದ ವಿದ್ವಾಂಸರಾದ ಡಾ. ಜಯಲಕ್ಷ್ಮೀ ಸೀತಾಪುರ (70) ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಭಾನುವಾರ ನಿಧನರಾದರು.ಅವರಿಗೆ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಪತಿ ಡಾ. ರಾಜಶೇಖರ್, ವಿದೇಶದಲ್ಲಿರುವ ಇಬ್ಬರು ಪುತ್ರಿಯರು ಇದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ ಕಾರಲ್ಲಿ ಹೊರಟಿದ್ದಾಗ ಇನ್ನೊಂದು ಕಾರು ಬಂದು ಡಿಕ್ಕಿ ಹೊಡೆದ ಘಟನೆ ಮಂಡ್ಯದ ಬಳಿ ನಡೆದಿತ್ತು. ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು.
ಅವರ ಅಂತ್ಯಕ್ರಿಯೆ ಮಂಗಳವಾರ (ಜೂ.18) ಮಧ್ಯಾಹ್ನ ಕುವೆಂಪುನಗರದ ಕಾವೇರಿ ಶಾಲೆ ಹತ್ತಿರದ ಸ್ಮಶಾನದಲ್ಲಿ ನಡೆಯಲಿದೆ.ಜಾನಪದ ಪ್ರಾಧ್ಯಾಪಕಿ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದವರಾದ ಅವರು, ಮೈಸೂರು ವಿವಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು ಕುರಿತು ಪಿಎಚ್ ಡಿ ಪದವಿ ಪಡೆದರು. ಅಮೆರಿಕಾದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು. ನಂತರ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.
ಶೋಧ:ಕನ್ನಡ ಜಾನಪದ, ಕನ್ನಡದಲ್ಲಿ ಐತಿಹಾಸಿಕ ಜಾನಪದ ಲಾವಣಿಗಳು, ಕನ್ನಡ ಸಮಗ್ರ ಗಾದೆಗಳು, ಐದು ಜಾನಪದ ಪ್ರಬಂಧಗಳು, ಜಾನಪದ ಒಕ್ಕಲು, ಕಲ್ಯಾಣವೆನ್ನಿ ಜನರೆಲ್ಲ, ಜಾನಪದ ಹಟ್ಟಿ, ಜಾನಪದ ಸಾಹಿತ್ಯದಲ್ಲಿ ಹಾಸ್ಯ, ಜಾನಪದ ತರಂಗ (ಜಾನಪದ ಕುರಿತ ಕೃತಿಗಳು), ಎದೆ ಕದವ ತಟ್ಟ್ಯಾವೆ (ಕವನ ಸಂಕಲನ), ಹಿರಿಯ ರಾಜಕಾರಣಿ ಕೆ. ಪುಟ್ಟಸ್ವಾಮಿ ಅವರ ಕುರಿತು ದಿಟ್ಟ ಸಾಧಕ, ತಬ್ಬಿಬ್ಬು ಹಾಗೂ ಬೆರಗು ಬೆಳಗು (ನಾಟಕಗಳು) ಅವರ ಪ್ರಮುಖ ಕೃತಿಗಳು. ಮುಖ್ಯವಾಗಿ ಕುಸ್ತಿ ಕಲೆ ಕುರಿತ ಅವರ ಕೃತಿ ಅನನ್ಯವಾದುದು. ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್ಡಿ ಅಧ್ಯಯನಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿ, ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದರು. ಡಾ. ಪ್ರೀತಿ ಶುಭಶ್ಚಂದ್ರ, ಡಾ.ಎಚ್.ಎಲ್. ಶೈಲಾ ಹಾಗೂ ಡಾ.ಎಚ್. ಗೌರಮ್ಮ ಅವರು ಸಂಪಾದಿಸಿದ ‘ಜಾನಪದ ಮಹಿಳಾಯಾನ’ ಕೃತಿಯನ್ನು ಅವರಿಗೆ ಸಮರ್ಪಿಸಲಾಗಿತ್ತು.ಪ್ರೊ.ನೀ.ಗಿರಿಗೌಡ ಸಂತಾಪ: ಜಾನಪದ ವಿದ್ವಾಂಸೆ ಡಾ.ಜಯಲಕ್ಷ್ಮೀ ಸೀತಾಪುರ ಅವರ ನಿಧನಕ್ಕೆ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ತೀವ್ರ ಸಂತಾಪ ಸೂಚಿಸಿದ್ದಾರೆ.