ಕನಕಗಿರಿ: ರೈತರ ಒಗ್ಗೂಡುವಿಕೆಗೆ ಜನಪದ ಕ್ರೀಡೆಗಳು ಸಹಕಾರಿಯಾಗಿದ್ದು, ಅವುಗಳನ್ನು ಆಯೋಜಿಸಬೇಕು ಎಂದು ಸುವರ್ಣಗಿರಿ ಸಂಸ್ಥಾನಮಠದ ಡಾ.ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಬಸರಿಹಾಳ ರಸ್ತೆಯಲ್ಲಿನ ರೈತರ ಜಮೀನಿನಲ್ಲಿ ಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಕುಂಟಿ ದಿಂಡಿನ ಮೇಲೆ ಉಸುಕಿನ ಚೀಲ ಎಳೆಯುವ ಸ್ಪರ್ಧೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎತ್ತುಗಳಿಂದ ರೈತರ ಬದುಕು ಹಸನಾಗಲಿದೆ. ಚಿನ್ನಕ್ಕಿಂತ ಅನ್ನವೇ ಮುಖ್ಯ. ಈ ದೀಶೆಯಲ್ಲಿ ರೈತರೆಲ್ಲರೂ ಒಗ್ಗೂಡಿ ಕುಂಟಿ ದಿಂಡಿನ ಮೇಲೆ ಉಸುಕಿನ ಚೀಲ ಎಳೆಯು ಸ್ಪರ್ಧೆ ಆಯೋಜಿಸಿ ಜನಪದ ಕ್ರೀಡೆ ಉಳಿಸಿ ಬೆಳೆಸುವ ಕಾರ್ಯ ಮಾಡಿರುವುದು ಸಂತೋಷವಾಗಿದೆ. ಇಂತಹ ಹಳ್ಳಿ ಸೊಗಡಿನ ಕ್ರೀಡೆಗಳ ಆಯೋಜನೆಯಿಂದ ರೈತರು ಒಗ್ಗೂಡುವಿಕೆ ಗಟ್ಟಿಯಾಗಲಿದೆ ಎಂದರು.

ಇತ್ತಿಚಿನ ದಿನಗಳಲ್ಲಿ ಯುವ ರೈತರು ಚಟಕ್ಕೆ ಬಲಿಯಾಗುವುದು ಹೆಚ್ಚಾಗಿ ಕಂಡು ಬಂದಿದ್ದು, ಚಟಮುಕ್ತರಾಗಿ ಜೀವನ ಸಾಗಿಸಿದರೆ ರೈತ ಸಮೂಹಕ್ಕೆ ಕನ್ಯೆ ಕೊಡುವವರ ಸಂಖ್ಯೆ ಏರಿಕೆಯಾಗಲಿದೆ. ಈ ನಿಟ್ಟಿನಲ್ಲಿ ದುಶ್ಚಟ ದೂರ ಮಾಡಿ ಬದುಕು ಹಸನು ಮಾಡಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.

ರೈತರಾದ ಹುಸೇನಸಾಬ ಗೋರಳ್ಳಿ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದರೆ ಮೆಲುಗಡೆ ಅಗಸಿಯ ಮೈಲಾರಿ ಸಿಂಗಾಪೂರ ದ್ವಿತೀಯ ಹಾಗೂ ಯುವ ರೈತ ನಾಗರಾಜ ಆರೇರ್ ಅವರ ಎತ್ತುಗಳು ತೃತೀಯ ಸ್ಥಾನ ಪಡೆದವು. ವಿಜೇತ ಎತ್ತುಗಳಿಗೆ ಕನಕದುರ್ಗಮ್ಮ ಎತ್ತುಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮೆಕ್ಕೆಜೋಳದ ಚೀಲ ನೀಡಿ, ಗೌರವಿಸಲಾಯಿತು.


ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಹನುಮಂತ ಬಸರಿಗಿಡ, ನಾಮ ನಿರ್ದೇಶಿತ ಸದಸ್ಯ ಶಾಂತಪ್ಪ ಬಸರಿಗಿಡ, ಗಂಗಾಧರಸ್ವಾಮಿ, ವಾಗೀಶ ಹಿರೇಮಠ, ಸಣ್ಣ ಕನಕಪ್ಪ,ಮಹಾಂತೇಶ ಸಜ್ಜನ್, ಟಿ.ಜೆ.ರಾಮಚಂದ್ರ, ಕೆ.ಎಚ್.ಕುಲಕರ್ಣಿ,ಶರಣಪ್ಪ ಭತ್ತದ,ನಿರುಪಾದಿ ಗೊಲ್ಲರ್, ಹನುಮಂತಪ್ಪ ಬೆಲ್ಲದಂಡಗಿ, ಕಂಠೆಪ್ಪ ತರ್ಲಕಟ್ಟಿ, ಗಣೇಶರೆಡ್ಡಿ ಕೆರಿ, ಕೃಷ್ಣಮೂರ್ತಿ ದಾಸರ ಸೇರಿದಂತೆ ಕನಕಗಿರಿ, ಬಸರಿಹಾಳ, ಸೋಮಸಾಗರ, ಅಡವಿಬಾವಿ, ಗೌರಿಪುರ, ಲಕ್ಕಂಪುರ ಗ್ರಾಮಗಳ ರೈತರು ಇದ್ದರು.

ಶಿಕ್ಷಕ ವೆಂಕೋಬ ಪೂಜಾರ ನಿರೂಪಿಸಿದರು.

ಒಣ ರಾಜಕೀಯದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾಯಕ, ನಿಷ್ಠೆ ಮೈಗೂಡಿಸಿಕೊಂಡು ಸಂಘಟಿತರಾಗಬೇಕು. ಸಂಘಟನೆಯಿಂದ ಗ್ರಾಮ, ಪಟ್ಟಣವೂ ಪರಿವರ್ತನೆಯಾಗಲಿದೆ. ಹೊಸ ಆಲೋಚನೆ ಹೊರಬಂದಾಗಲೇ ನಮ್ಮ ಪ್ರಗತಿಗೆ ಸ್ಫೂರ್ತಿಯಾಗಿವೆ ಎಂದು ಡಾ. ಚನ್ನಮಲ್ಲಶ್ರೀ ತಿಳಿಸಿದ್ದಾರೆ.