ಸಾರಾಂಶ
ಹಾವೇರಿ: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 8 ಮತ್ತು 9 ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಡಿ. 2 ರಂದು ಬೆಳಗ್ಗೆ 11.30ಕ್ಕೆ ಜಾನಪದ ವಿಶ್ವವಿದ್ಯಾಲಯ ಆವರಣದ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ.ಟಿ.ವಿ. ಕಟ್ಟಿಮನಿ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಪಾಲ್ಗೊಳ್ಳುತ್ತಿದ್ದಾರೆ ಎಂದರು. ೨೦೨೧-೨೨ನೇ ಸಾಲಿನ ೮ನೇ ಘಟಿಕೋತ್ಸವದಲ್ಲಿ ೧ ಪಿಎಚ್‌ಡಿ, ೩ ಚಿನ್ನದ ಪದಕ, ೧೩ ಪ್ರಥಮ ರ‍್ಯಾಂಕ್ ಸೇರಿದಂತೆ ಒಟ್ಟು ೨೧೬ ವಿದ್ಯಾರ್ಥಿಗಳಿಗೆ ಮತ್ತು ೨೦೨೨-೨೩ನೇ ಸಾಲಿನ ೯ನೇ ಘಟಿಕೋತ್ಸವದಲ್ಲಿ ೩ ಪಿಎಚ್‌ಡಿ, ೧೧ ಚಿನ್ನದ ಪದಕ, ೧೪ ಪ್ರಥಮ ರ‍್ಯಾಂಕ್ ಸೇರಿದಂತೆ ಒಟ್ಟು ೩೨೭ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.ಪ್ರಸಕ್ತ ಜಾನಪದ ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಮಾಡಲಾದ ನೇಮಕದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ, ಅಂತಹ ಆರೋಪಗಳಲ್ಲಿ ಹುರುಳಿಲ್ಲ. ಸರ್ಕಾರದ ನಿಯಮಾವಳಿ ಮತ್ತು ಪರೀಕ್ಷಾ ನಿಯಮಗಳನ್ನು ಪಾಲಿಸಿದ್ದೇವೆ. ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಸರ್ಕಾರದ ತನಿಖಾ ಸಮಿತಿ ಕೂಡ ಪರಿಶೀಲನೆ ನಡೆಸಿ ವರದಿ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಸರಿಯಾದ ರೀತಿಯಲ್ಲೇ ನಡೆದಿದೆ ಎಂದೇ ವರದಿ ನೀಡದೆ ಎಂದು ಸ್ಪಷ್ಟಪಡಿಸಿದರು.ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ.ಟಿ. ಗುರುಪ್ರಸಾದ, ಮೌಲ್ಯಮಾಪನ ಕುಲಸಚಿವ ಎನ್.ಎಂ. ಸಾಲಿ, ಸಹಾಯಕ ಕುಲಸಚಿವ ಶಹಜಹಾನ ಮುದಕವಿ, ಪ್ರೊ.ವೆಂಕನಗೌಡ ಪಾಟೀಲ ಇದ್ದರು.
ಆರು ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ: ಇನ್ನು ಜಾನಪದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು ಆರು ಜನರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ. ೨೦೨೧-೨೨ನೇ ಸಾಲಿನ ಜಾನಪದ ವೈದ್ಯ ಡಾ. ಹನುಮಂತಪ್ಪ ಗೋವಿಂದಪ್ಪ ದಡ್ಡಿ, ಜನಪದ ಸಾಹಿತಿ ಡಾ. ಶಾಂತಿ ನಾಯಕ, ರಾಮನಗರದ ಹಾಸನ ರಘು ಅವರಿಗೆ ಹಾಗೂ ೨೦೨೨-೨೩ನೇ ಸಾಲಿನಲ್ಲಿ ಬೆಂಗಳೂರಿನ ಡಾ. ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಪುರಾಣ ಕಾವ್ಯ ಭಾರತೀಯ ಪರಂಪರೆಯ ವಿಮರ್ಶಕ ಡಾ.ಎಸ್.ಸಿ. ಶರ್ಮಾ, ಯಾದಗಿರಿಯ ಜನಪದ ವಿದ್ವಾಂಸ ಸಿದ್ಧರಾಮ ಹೊನ್ಕಲ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೆಟ್‌ಗಳನ್ನು ವಿಶ್ವವಿದ್ಯಾಲಯದ ವತಿಯಿಂದ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಜಾನಪದ ವಿವಿ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಹೇಳಿದರು.
₹೯೬ ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ: ಜಾನಪದ ವಿಶ್ವವಿದ್ಯಾಲಯದ ಹಣಕಾಸಿನ ಸ್ಥಿತಿ ಶೋಚನೀಯವಾಗಿದೆ. ೫೦ ಬೋಧಕ ಮತ್ತು ೫೦ ಬೋಧಕೇತರ ಸಿಬ್ಬಂದಿ ಇದ್ದು, ಮಾಸಿಕ ₹೨.೨೫ ಕೋಟಿ ಹಣ ವೇತನ ಸಂದಾಯಕ್ಕೆ ಅಗತ್ಯವಿದೆ. ಇನ್ನು ಬೋಧಕೇತರ ಸಿಬ್ಬಂದಿ ವೇತನಕ್ಕಾಗಿ ಸ್ಥಳೀಯ ಹಣಕಾಸಿನ ಸಂಪನ್ಮೂಲ, ಅಭಿವೃದ್ಧಿ ಖಾತೆಯ ಅನುದಾನ ಬಳಸಿ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳು ವೇತನಾನುದಾನ ಮತ್ತು ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತಿದ್ದು, ಪ್ರಸಕ್ತ ಜಾನಪದ ವಿವಿಗೆ ಒಟ್ಟು ೯೬ ಕೋಟಿಗಳ ಅನುದಾನ ಅಗತ್ಯವಿದೆ ಎಂದು ಜಾನಪದ ವಿವಿ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಹೇಳಿದರು.