ಯುವ ಜನತೆಯಲ್ಲಿ ಜಾನಪದ ಜಾಗೃತವಾಗಲಿ: ಟೆಂಗಿನಕಾಯಿ

| Published : Jan 12 2024, 01:45 AM IST

ಸಾರಾಂಶ

ಇಂದಿನ ಕಾಲದಲ್ಲಿ ಜಾನಪದ ಕಲಾವಿದರನ್ನು ಹಾಗೂ ಕಲಾ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಜಾನಪದ ಕಲೆ ಕಲಿಸುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹ

ಹುಬ್ಬಳ್ಳಿ: ಇಂದಿನ ಯುಗದಲ್ಲಿ ಜಾನಪದ ಜಾಗೃತವಾಗಿ ಉಳಿಯಬೇಕು ಹಾಗೂ ಬೆಳೆಯಬೇಕು ಎಂದರೆ ಯುವಕರಲ್ಲಿ ಜಾನಪದವನ್ನು ಜಾಗೃತಗೊಳಿಸುವ ಕಾರ್ಯವಾಗಬೇಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಅವರು ಇಲ್ಲಿನ ತೋಳನಕೆರೆಯ ಬಯಲು ರಂಗಮಂದಿರದಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 18ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾನಪದ ಪರಂಪರಾ ಉತ್ಸವ-2024 ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದ್ಯಮಿ ಮಹೇಂದ್ರ ಶಿಂಘಿ ಮಾತನಾಡಿ, ಇಂದಿನ ಕಾಲದಲ್ಲಿ ಜಾನಪದ ಕಲಾವಿದರನ್ನು ಹಾಗೂ ಕಲಾ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಜಾನಪದ ಕಲೆ ಕಲಿಸುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹ ಎಂದರು.

ಇದೇ ಸಂದರ್ಭದಲ್ಲಿ ಜಾನಪದ ನೃತ್ಯಗಳು, ಜಗ್ಗಲಗಿ ಪ್ರದರ್ಶನ, ಮಕ್ಕಳ ಭರತನಾಟ್ಯ, ಕರಡಿ ಮಜಲು, ವಚನ ನೃತ್ಯಗಳು, ಡೊಳ್ಳು ಕುಣಿತ, ತಬಲಾ ವಾದನ, ಜಾನಪದ ಸುಗ್ಗಿ ಹಾಡುಗಳು, ಕೊಳಲು ವಾದನ, ಕನ್ನಡ ನಾಡು ನುಡಿ ನೃತ್ಯಗಳು ಜರುಗಿದವು.

ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಶಂಭಯ್ಯಾ ಹಿರೇಮಠ, ರಾಜು ಜರತರಘರ್, ಡಾ. ಚಂದನ ಹುದ್ದಾರ ಸೇರಿದಂತೆ ಹಲವರಿದ್ದರು. ಸಂಸ್ಥೆಯ ಭಾರತನಾಟ್ಯ ಗುರು ವಿಧುಷಿ ಚೈತ್ರಾ ಚನ್ನಯ್ಯ ವಸ್ತ್ರದ ಸ್ವಾಗತಿಸಿದರು. ರೋಹಿತ ಹಬೀಬ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ಚನ್ನಯ್ಯ ವಸ್ತ್ರದ ವಂದಿಸಿದರು.