ಸಿರುಗುಪ್ಪ: ಜಾನಪದ ಜಾಗರಣೆ ಎಂದರೆ ಗ್ರಾಮೀಣ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಲೆ, ಗೀತೆ ಮತ್ತು ಆಚರಣೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಎಂ. ನಾಗರಾಜಸ್ವಾಮಿ ತಿಳಿಸಿದರು.
ತಾಲೂಕಿನ ಸಿರಿಗೇರಿ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮುದ್ದಟನೂರಿನ ಲಕ್ಷ್ಮಿ ನಗರ ಕ್ಯಾಂಪಿನ ಕಲಾ ಟ್ರಸ್ಟ್ ನ ಹೆಜ್ಜೆಗೆಜ್ಜೆ ಬಯಲಾಟ ತಂಡ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಜಾಗರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮರೆಯಾಗುತ್ತಿರುವ ಜಾನಪದ ಕಲೆಗಳು, ಹಾಡುಗಳು, ಸಂಪ್ರದಾಯಗಳನ್ನು ಉಳಿಸುವುದು, ಗ್ರಾಮೀಣ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದು ಎಂದರು.
ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮುಖಂಡ ಎಸ್.ಎಂ ಅಡಿವೆಯ್ಯ ಸ್ವಾಮಿ ಮಾತನಾಡಿದರು.ಶಂಭುಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹೂಗಾರ್ ಬಸವರಾಜ್ ಮಾತನಾಡಿದರು. ಸುಗಮ ಸಂಗೀತ, ರಂಗಗೀತೆ, ಡೊಳ್ಳು ಕುಣಿತ, ಸಮೂಹ ನೃತ್ಯ, ಸಾಮಾಜಿಕ ನಾಟಕ ಸಂಸಾರದಲ್ಲಿ ಸ.ನಿ.ದ.ಪ ನಾಟಕ ಪ್ರದರ್ಶನ ನೆರೆದಿದ್ದ ಸಾರ್ವಜನಿಕರಿಗೆ ಮನರಂಜನೆ ಒದಗಿಸಿದವು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ.ವೀಣಾಕುಮಾರಿ ಸೇರಿದಂತೆ ಇತರ ಕಲಾವಿದರನ್ನು ಸನ್ಮಾನಿಸಲಾಯಿತು. ಮುಖಂಡರಾದ ಸಿಎಂ ನಾಗರಾಜಸ್ವಾಮಿ, ವಿರುಪಾಕ್ಷಗೌಡ ಎಸ್.ಎಂ., ಅಡಿವೆಯ್ಯಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸೋಮಶೇಖರಪ್ಪ, ಕುಂಬಾರ್ ಬಸವರಾಜ್, ವಿಶ್ವಗುರು ಬೈಲಾಟಗಳ ಟ್ರಸ್ಟ್ ಅಧ್ಯಕ್ಷ ಏಳಬೆಂಚಿ ಮಲ್ಲಿಕಾರ್ಜುನಗೌಡ, ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷ ಎಚ್.ತಿಪ್ಪೇಸ್ವಾಮಿ ಇದ್ದರು.