ಎಲ್ಲ ಸಾಹಿತ್ಯಕ್ಕೂ ಜಾನಪದವೇ ಮೂಲ: ಡಾ.ಎಸ್.ಬಾಲಾಜಿ

| Published : Nov 27 2024, 01:01 AM IST

ಎಲ್ಲ ಸಾಹಿತ್ಯಕ್ಕೂ ಜಾನಪದವೇ ಮೂಲ: ಡಾ.ಎಸ್.ಬಾಲಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಸಾಹಿತ್ಯಕ್ಕೂ ಜಾನಪದವೇ ಮೂಲವಾಗಿದೆ ಎಂದು ರಾಜ್ಯ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಎಲ್ಲಾ ಸಾಹಿತ್ಯಕ್ಕೂ ಜಾನಪದವೇ ಮೂಲವಾಗಿದೆ ಎಂದು ರಾಜ್ಯ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ತಿಳಿಸಿದರು.

ತಾಲೂಕಿನ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಕನ್ನಡ ಜಾನಪದ ರಾಜ್ಯೋತ್ಸವ ಸಮಾರಂಭವನ್ನು ಮಂಗಳವಾರ ಬೀಸುವ ಕಲ್ಲು ತಿರುಗಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಮಾತನಾಡಿದರು.

ಜಾನಪದಕ್ಕೆ ಜಾತಿ, ಧರ್ಮದ ಚೌಕಟ್ಟು ಇಲ್ಲ. ಪ್ರಸ್ತುತ ಜಾನಪದ ಸಮೃದ್ಧವಾಗಿದೆ. ಆದರೆ, ಜಾನಪದವು ಕಾಲ, ಕಾಲಕ್ಕೆ ಬದಲಾಗುತ್ತಾ ಪರಿವರ್ತನೆಯಾಗಿದೆ. ಹಿಂದೆ ಇದ್ದ ಜಾನಪದಕ್ಕೂ ಈಗಿನ ಆಧುನಿಕ ಜಾನಪದಕ್ಕೂ ವ್ಯತ್ಯಾಸವಿದೆ. ದುರಂತ ಎಂದರೆ ಈಗ ಸಾಂಸ್ಕೃತಿಕ ವಲಯಕ್ಕೂ ರಾಜಕೀಯ ಕಾಲಿಟ್ಟಿದೆ. ಪ್ರತಿಯೊಂದು ಅಕಾಡೆಮಿಗಳ ನೇಮಕಕ್ಕೂ ರಾಜಕೀಯ ತರಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾನು ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷನಾದ ಮೇಲೆ ಕಳೆದ 9 ವರ್ಷದಿಂದ 12 ಸಾವಿರ ಕಾರ್ಯಕ್ರಮ ನಡೆಸಿದ್ದೇನೆ. ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಪ್ರಾರಂಭವಾಗಿದೆ. ಜೊತೆಗೆ ಜಿಲ್ಲಾ ಮಹಿಳಾ ಘಟಕವನ್ನು ಪ್ರಾರಂಭಿಸಿದ್ದು ಪ್ರಸ್ತುತ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದವರು ಜಿಲ್ಲಾ ಸಮ್ಮೇಳನ ನಡೆಸಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಶೀಘ್ರದಲ್ಲೇ ಜಾನಪದ ಸಮ್ಮೇಳನ ನಡೆಯಲಿದೆ. ನರಸಿಂಹರಾಜಪುರದಲ್ಲಿ ಕನ್ನಡ ಜಾನಪದ ಮಹಿಳಾ ಘಟಕ ಪ್ರಾರಂಭವಾಗಿದ್ದು ಜಯಂತಿ ಅವರು ನೂತನ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ್ದಾರೆ. ಕೃಷಿ ಸಂಸ್ಕೃತಿಯಿಂದ ಜಾನಪದ ಪ್ರಾರಂಭವಾಗಿದ್ದರೂ ಮಹಿಳೆಯರಿಂದಲೇ ಜಾನಪದ ಉಳಿಯಬೇಕಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ.ಜಾನಪದ ಎಸ್ ಬಾಲಾಜಿ ಅವರು ಜಾನಪದದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ದೆಹಲಿಯವರೆಗೂ ಜಾನಪದ ಕಾರ್ಯಕ್ರಮ ನಡೆದಿದೆ. ಹಿಂದೆ ಇದ್ದ ಎತ್ತಿನ ಗಾಡಿ, ಬೀಸುವ ಕಲ್ಲು ಮರೆಯಾಗಿದೆ. ಜಾನಪದ ಮರೆಯಾದರೆ ಮನುಕುಲದ ಸಂಸ್ಕೃತಿಯೇ ನಾಶವಾದಂತೆ ಎಂದು ಎಚ್ಚರಿಕೆ ನೀಡಿದರು.

ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಮಾತನಾಡಿ, 25 ವರ್ಷಗಳ ಹಿಂದೆ ರಾಜ್ಯಾದ್ಯಂತ ಯುವಜನ ಮೇಳ ನಡೆಯತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಯುವಜನ ಮೇಳ ಮರೆಯಾಗಿದೆ. ಡಾ.ಜಾನಪದ ಎಸ್ ಬಾಲಾಜಿ ಅವರು ಯುವಜನ ಮೇಳದಿಂದಲೇ ಮೇಲೆ ಬಂದು ರಾಜ್ಯ ಮಟ್ಟದ ಕನ್ನಡ ಜಾನಪದ ಪರಿಷತ್ತು ಹುಟ್ಟು ಹಾಕಿದ್ದಾರೆ. ಈಗ ರಾಜ್ಯದ 30 ಜಿಲ್ಲೆಗಳಲ್ಲಿ ಕನ್ನಡ ಜಾನಪದ ಪರಿಷತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಮಹಿಳಾ ಘಟಕ ಸ್ಥಾಪನೆ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಿಳಾ ಅಧ್ಯಕ್ಷರಾಗಿ ವಿಶಾಲಾಕ್ಷಮ್ಮ ಉತ್ತಮ ಕೆಲಸ ಮಾಡುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಮಹಿಳಾ ಘಟಕ ಪ್ರಾರಂಭಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಜಾನಪದ ಕಾರ್ಯಕ್ರಮ ನಡೆಸಬೇಕು ಎಂದು ಸಲಹೆ ನೀಡಿದರು.

ನರಸಿಂಹರಾಜಪುರ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ನೂತನ ಅಧ್ಯಕ್ಷೆ ಜಯಂತಿ ರಮೇಶ್ ಅವರಿಗೆ ಕನ್ನಡ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಮ್ಮ ಅಧಿಕಾರ ಹಸ್ತಾಂತರಿಸಿದರು.

ಈ ವೇಳೆ ಜಾನಪದ ಕಲಾವಿದರಾದ ಕೋಡಿಹಳ್ಳಿ ಉಮಾ ನಾರಾಯಣಸ್ವಾಮಿ, ವರ್ಕಾಟೆಯ ಸರಸ್ವತಿ ನಾಗರಾಜ್, ಕರವೇ ಹಿರಿಯ ಸದಸ್ಯೆ ಜಾನಕಮ್ಮ ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ತಾ.ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ, ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ತಾಲೂಕು ಅಧ್ಯಕ್ಷ ಅಶೋಕ್, ಗ್ರಾಪಂ ಅಧ್ಯಕ್ಷೆ ನಾಗರತ್ನ, ನಾರಾಯಣಗುರು ಸಮಾಜ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ವಾಸುದೇವಕೋಟ್ಯಾನ್ ಇದ್ದರು. ಕೆ.ಎಸ್.ರಾಜಕುಮಾರ್ ಸ್ವಾಗತಿಸಿದರು. ಮೋಹಿನಿ ನಿರೂಪಿಸಿದರು. ಸುಜಾತ ವಂದಿಸಿದರು. ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಸದಸ್ಯರು ಹಾಗೂ ಕರವೇ ಮಹಿಳಾ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.