ಜಾನಪದ ಗಾಯನ ಮತ್ತು ಜಾನಪದ ಸಾಹಿತ್ಯೋತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಪಾಶ್ಚಾತ್ಯ ಸಂಸ್ಕೃತಿ ವ್ಯಾಮೋಹ ಮತ್ತು ಆಧುನಿಕತೆ ಅತಿಯಾದ ಗೀಳಿನಿಂದಾಗಿ ಜಾನಪದವಿಂದು ಮೂಲೆಗುಂಪಾಗುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ವಿಷಾದಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ, ಶ್ರೀ ಬಸವೇಶ್ವರ ಜಾನಪದ ಕಲಾಸಂಘ ತಾಲೂಕಿನ ಬೆಳವಾಡಿಯಲ್ಲಿ ಏರ್ಪಡಿಸಿದ್ದ ಜಾನಪದ ಗಾಯನ ಮತ್ತು ಜಾನಪದ ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿ ಜಾನಪದವೆಂದರೆ ಜ್ಞಾನಪದ, ಅದು ಭಾರತೀಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮೂಲಬೇರು, ನಮ್ಮ ಗ್ರಾಮೀಣ ಜನರ ಜೀವನಾಡಿಯಾಗಿದೆ. ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹ ದಿಂದ ಹೊರಬಂದು ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು, ಆ ಮೂಲಕ ಅದನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದರು.ಜಾನಪದ ಗಾಯಕ ಡಾ ಅಪ್ಪಗೆರೆ ತಿಮ್ಮರಾಜು ಮಾತನಾಡಿ, ನಮ್ಮ ಹಳ್ಳಿಗಳೇ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಗಮ ಸ್ಥಾನ ಗಳಾಗಿರುವುದರಿಂದ ಜಾನಪದ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಆಯೋಜಿಸಬೇಕು. ಹಾಗಾದಾಗ ಮಾತ್ರ ಯುವಜನತೆ ಜಾನಪದದತ್ತ ಹೊರಳಲು ಸಾಧ್ಯ ಎಂದರು.
ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ ಜೆ.ಪಿ.ಕೃಷ್ಣೇಗೌಡ ಮಾತನಾಡಿ ಜಾನಪದಕ್ಕೆ ಜಾತಿ, ಧರ್ಮದ ಯಾವುದೇ ಕಟ್ಟುಪಾಡುಗಳಿಲ್ಲ. ಅದು ಧಾರ್ಮಿಕ ಸಹಿಷ್ಣುತೆ ಮೂಡಿಸಿ ಸಮಾಜದಲ್ಲಿ ಭಾವೈಕ್ಯತೆ ಬೆಳೆಸುತ್ತದೆ. ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮಕ್ಕಳಿಗೆ ನೈತಿಕತೆ ಕಲಿಸುತ್ತದೆ ಎಂದು ತಿಳಿಸಿದರು.
ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಜಾನಪದ ಸಮ್ಮೇಳನ, ತರಬೇತಿ ಶಿಬಿರ ಸೇರಿದಂತೆ ಅನೇಕ ಜಾನಪದ ಕಾರ್ಯಕ್ರಮಗಳನ್ನು ಪರಿಷತ್ತು ಜಿಲ್ಲೆ, ತಾಲೂಕು, ಹೋಬಳಿ ಮತ್ತು ಹಳ್ಳಿ ಹಳ್ಳಿಗಳಲ್ಲಿ ನಿರಂತರವಾಗಿ ನಡೆಸುತ್ತಿರುವುದರಿಂದ ಯುವಜನತೆ ಜಾನಪದದತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.
4ನೇ ಜಿಲ್ಲಾ ಜಾನಪದ ಸಮ್ಮೇಳನದ ಅಧ್ಯಕ್ಷ ಬೆಳವಾಡಿ ಪರಮೇಶ್ವರಪ್ಪ ಮಾತನಾಡಿ ಜಾನಪದ ಕಲೆ. ಸಾಹಿತ್ಯ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಜಾನಪದವನ್ನು ಪಠ್ಯ ಪುಸ್ತಕಗಳಿಗೆ ಅಳವಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಜಾನಪದದ ಕಾರ್ಯಕ್ರಮವನ್ನು ನಿರಂತರ ವಾಗಿ ನಡೆಸಬೇಕು ಎಂದು ಸಲಹೆ ಮಾಡಿದರು.ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮಾರಂಭದಲ್ಲಿ ಜಾನಪದ ಕಲಾಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು, ಗ್ರಾಪಂ ಅಧ್ಯಕ್ಷೆ ಸಿರಾಜ್ ಅಮಿರ್ ಜಾನ್, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ, ಜಿಲ್ಲಾ ಸಂಚಾಲಕಿ ಗಾಯತ್ರಮ್ಮ. ಜಗದೀಶ್ವರಾಚಾರ್, ಚಿಕ್ಕನಲ್ಲೂರು ಜಯಣ್ಣ, ತಿಪ್ಪೇಶ,ಅಮಿರ್ ಜಾನ್, ಬಿಸ್ಲೆಹಳ್ಳಿ ಸೋಮಶೇಖರ್, ಮಂಜುನಾಥ, ನಾಗರಾಜು, ಓಂಕಾರಪ್ಪ, ಲಲಿತೇಶ, ನಂಜುಂಡಪ್ಪ ನಾಗರಾಜು, ಬಸವೇಗೌಡ, ಶಂಕ್ರಯ್ಯ, ಗಂಗಾಧರಯ್ಯ, ಶಿವ ನಂಜೇಗೌಡ, ಮಲ್ಯಪ್ಪ, ನಿಡುವಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.