ಸಾರಾಂಶ
ಬಂಟ್ವಾಳ: ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ತುಳು, ಕನ್ನಡ ವಿದ್ವಾಂಸ ಡಾ.ವಾಮನ ನಂದಾವರ (81) ಶನಿವಾರ ಬೆಳಗ್ಗೆ ಮಂಗಳೂರಿನಲ್ಲಿ ನಿಧನರಾದರು. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ.ಜಾನಪದ ವಿದ್ವಾಂಸರಾಗಿದ್ದ ಅವರು, ಕೋಟಿ ಚೆನ್ನಯ್ಯರ ಕುರಿತು ಸಂಶೋಧನೆ ನಡೆಸಿದ್ದಾರೆ. 25 ಪುಸ್ತಕಗಳನ್ನು ಬರೆದಿರುವ ಅವರು, ಪ್ರಕಾಶಕರಾಗಿ, ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು.ಬಾಬು ಬಾಳೆಪುಣಿ- ಪೂವಮ್ಮ ದಂಪತಿ ಮಗನಾಗಿ 1944ರ ನ.15ರಂದು ಜನಿಸಿದ ಡಾ.ವಾಮನ, ಬಂಟ್ವಾಳ ತಾಲೂಕಿನ ಮುದುಂಗಾರು ಕಟ್ಟೆ ಸರ್ಕಾರಿ ಎಲಿಮೆಂಟರಿ ಶಾಲೆ, ಪಾಣೆಮಂಗಳೂರಿನ ಎಸ್‌ವಿಎಸ್ ಹೈಯರ್ ಎಲಿಮೆಂಟರಿ ಶಾಲೆ, ಕುರ್ನಾಡಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಬಳಿಕ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಬಿಎಸ್ಸಿ ಪದವಿ ಪಡೆದರು.ಮಂಗಳೂರು ಸರ್ಕಾರಿ ಮಹಾವಿದ್ಯಾಲಯದಲ್ಲಿ ಬಿಎಡ್ ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂಎ (ಕನ್ನಡ), ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಎಂ.ಎಡ್ ಪದವಿ ಪಡೆದಿದ್ದರು.ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಸಹಾಯಕ ಅಧ್ಯಾಪಕ, ಸೈಂಟ್ ಆನ್ಸ್ ಪ್ರೌಢಶಾಲೆಯ ಸಹಾಯಕ ಅಧ್ಯಾಪಕರಾಗಿ ಕರ್ತವ್ಯ ಸಲ್ಲಿಸಿ ಬಳಿಕ ಮಂಗಳೂರಿನ ಸೈಂಟ್ ಆನ್ಸ್ ಮಹಿಳಾ ಶಿಕ್ಷಕ- ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಮಾರ್ಗದರ್ಶಕರಾಗಿ ದುಡಿದಿದ್ದ ಅವರು, ಪಿಲಿಕುಳ ನಿಸರ್ಗಧಾಮದ ಯೋಜನಾಧಿಕಾರಿಯಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಕಳೆದ ಮೂರು ವರ್ಷಗಳಿಂದ ಉಳಾಯಿಬೆಟ್ಟುವಿನ ವೃದ್ಧಾಶ್ರಮದಲ್ಲಿ ವಾಸವಾಗಿದ್ದ ಅವರು, ಪತ್ನಿ ಲೇಖಕಿ ಚಂದ್ರಕಲಾ ನಂದಾವರ, ಓರ್ವ ಮಗ, ಇಬ್ಬರು ಪುತ್ರರು ಸೇರಿದಂತೆ ಅಪಾರ ಅಭಿಮಾನಿ ಹಾಗೂ ಶಿಷ್ಯ ವರ್ಗವನ್ನು ಅಗಲಿದ್ದಾರೆ.
----------ತುಳು ಭವನದಲ್ಲಿ ಡಾ.ವಾಮನ ನಂದಾವರ ಪಾರ್ಥೀವ ಶರೀರ ಅಂತಿಮ ದರ್ಶನ
ಶನಿವಾರ ನಿಧನರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಡಾ.ವಾಮನ ನಂದಾವರ ಪಾರ್ಥೀವ ಶರೀರವನ್ನು ನಗರದ ಉರ್ವಸ್ಟೋರ್‌ನ ತುಳು ಭವನದ ಬಯಲುರಂಗ ಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಯಿತು.ಈ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಎಚ್. ,ಮಾಜಿ ಶಾಸಕ ಜೆ.ಆರ್.ಲೋಬೋ, ವಿದ್ವಾಂಸರಾದ ಡಾ.ಪ್ರಭಾಕರ ಜೋಶಿ, ಡಾ.ಚಿನ್ನಪ್ಪಗೌಡ, ಇಂದಿರಾ ಹೆಗ್ಗಡೆ,ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಅಕಾಡೆಮಿ ರಿಜಿಸ್ಟ್ರಾರ್, ಸದಸ್ಯರು ಹಾಗೂ ವಾಮನನಂದಾವರ ಅವರ ಅಭಿಮಾನಿ ಮಿತ್ರರು ಅಂತಿಮ ದರ್ಶನ ಪಡೆದರು.ದೇಹದಾನ:ಡಾ.ವಾಮನ ನಂದಾವರ ಇವರ ಪಾರ್ಥೀವ ಶರೀರವನ್ನು ಅವರ ಇಚ್ಛೆಯಂತೆ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾನ ಮಾಡಲಾಯಿತು.2001ರಿಂದ 2004ರ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ. ವಾಮನನಂದಾವರ ಅವರು ಅನನ್ಯವಾದ ಸೇವೆಯನ್ನು ಸಲ್ಲಿಸಿರುವುದನ್ನು ತುಳುನಾಡು ಹಾಗೂ ತುಳುವರು ಸದಾ
ಸ್ಮರಿಸುವರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಂತಾಪವ್ಯಕ್ತಪಡಿಸಿದ್ದಾರೆ.
ಇದನ್ನೂ ಮುನ್ನ ಡಾ.ವಾಮನ ನಂದಾವರ ಅವರಿಗೆ ತುಳು ಅಕಾಡೆಮಿ ವತಿಯಿಂದ ನಡೆದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.-----------------