ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರೋಗಗಳಿಗೆ ತುರ್ತಾಗಿ ಸಮಸ್ಯೆ ಅನುಭವಿಸುವುದಕ್ಕಿಂತಲೂ ರೋಗ ಅಂಟಿಸಿಕೊಳ್ಳದೆ ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಂಡರೆ ರೋಗಗಳಿಂದ ದೂರವಿರಬಹುದೆಂದು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ. ಎನ್. ಪುಟ್ಟಸ್ವಾಮಿಗೌಡ ಹೇಳಿದರು.

ಪಟ್ಟಣದಲ್ಲಿನ ಕಂಟ್ರ್ಯಾಕ್ಟರ್‌ ಅಸೋಸಿಯೇಷನ್ ಅಂಡ್ ಕ್ಲಬ್ ತನ್ನ 200 ಮಂದಿ ಸದಸ್ಯರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ಪರೀಕ್ಷೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಕ್ಲಬ್ 22 ವರ್ಷಗಳಿಂದ ಮನರಂಜನೆಗಷ್ಟೇ ಸೀಮಿತವಾಗದೆ ಕ್ಲಬ್ ಕಲೆ, ಕ್ರೀಡೆ, ಸಾಹಿತ್ಯ, ರಂಗಭೂಮಿ ಸೇರಿನಹಲವು ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಇದೀಗ ತನ್ನೆಲ್ಲಾ ಸದಸ್ಯರಿಗೆ ಆರೋಗ್ಯ ಶಿಬಿರವನ್ನು ನಡೆಸುತ್ತಿದೆ. ರೋಗಗಳನ್ನು ಅಂಟಿಸಿಕೊಂಡು ನೋವು ಅನುಭವಿಸುವುದಕ್ಕಿಂತ ಬರದಂತೆ ಎಚ್ಚರ ವಹಿಸುವುದು ಮುಖ್ಯ. 40 ವಯೋಮಿತಿ ದಾಟಿದ ಪ್ರತಿ ಯೊಬ್ಬರೂ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೈಹಿಕವಾಗಿ ಬಲಾಢ್ಯವಾಗಿದ್ದೇನೆ ಎಂದು ತಪಾಸಣೆಯಿಂದ ದೂರ ಉಳಿಯುವುದು ತಪ್ಪು, ಇಂದಿನ ಆಹಾರ ಪದ್ಧತಿ, ಜೀವನಶೈಲಿಯಿಂದ ಶೀಘ್ರ ರೋಗಕ್ಕೆ ತುತ್ತಾಗುತ್ತಿದ್ದೇವೆ, ಮಧುಮೇಹ, ರಕ್ತದೊತ್ತಡವನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್‌ನ ಅಧ್ಯಕ್ಷ ತೋಪೆಗೌಡ ಮಾತನಾಡಿ, ಕ್ಲಬ್ ಆರಂಭವಾಗಿ 22 ವರ್ಷಗಳಾಗಿದ್ದು, ನಮ್ಮ ಸದಸ್ಯರ ಉತ್ತಮ ಆರೋಗ್ಯದ ದೃಷ್ಠಿಯಿಂದ ಮೊದಲ ಬಾರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿ ದ್ದೇವೆ. ಜಾಗದ ಕೊರತೆಯಿಂದ ಮೊದಲ ಹಂತದಲ್ಲಿ ಬರೀ ಸದಸ್ಯರಿಗೆ ಮಾತ್ರ ಶಿಬಿರ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಕುಟುಂಬದವರಿಗೆ ಮತ್ತು ಸಾರ್ವಜನಿಕರಿಗೆ ಹಮ್ಮಿಕೊಳ್ಳುವ ಇಚ್ಛೆ ಹೊಂದಿದ್ದೇವೆ. ನಮ್ಮ ಕೋರಿಕೆಗೆ ಪುಣ್ಯ ಆಸ್ಪತ್ರೆ ಮುಖ್ಯಸ್ಥ ಡಾ. ಮಹೇಶ್ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಯುವರಾಜ್ ಸಹಕಾರ ನೀಡಿದ್ದು ಅವರಿಗೆ ಮತ್ತವರ ತಂಡಕ್ಕೆ ಕೃತಜ್ಞರಾಗಿದ್ದೇವೆ ಎಂದರು.

ಕ್ಲಬ್‌ನ ಗೌರವಾಧ್ಯಕ್ಷ ಸಿ.ವೈ.ಪ್ರವೀಣ್, ಉಪಾಧ್ಯಕ್ಷರಾದ ಯೋಗಣ್ಣ, ಎನ್. ರಂಗಸ್ವಾಮಿ, ಕಾರ್ಯದರ್ಶಿ ಎಸ್. ಎಲ್. ರಮೇಶ್, ಜಂಟಿ ಕಾರ್ಯದರ್ಶಿ ಪಿ.ಜೆ. ರಾಮಕೃಷ್ಣ ಗೌಡ, ಖಜಾಂಚಿ ಸಿ. ಎನ್ ಪಾಂಡು, ನಿರ್ದೇಶಕರಾದ ವೆಂಕಟೇಗೌಡ, ಕೆ. ಎನ್. ಶಂಕರ್‌, ರಾಜು, ಧರಣೇಶ್, ಗಂಗಾಧರ್‌, ಸಿ. ಆರ್‌. ನಂಜಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಬಿ. ಜಗದೀಶ್, ಡಾ. ಮಹೇಶ್ ಇದ್ದರು.