ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸೆ ವಿಭಾಗದಿಂದ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘದ ಸಹಯೋಗದಲ್ಲಿ ವಿಶ್ವ ಆಘಾತ ದಿನ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಮುಂದುವರೆದ ಆಘಾತ ಜೀವನ ಆಸರೆ ಮತ್ತು ಹೃದಯ ಶ್ವಾಸಕೋಶಗಳ ಪುನರುಜ್ಜೀವನ ತರಬೇತಿ ಶಿಬಿರ ನಡೆಯಿತು. ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಈ ತರಬೇತಿ ಶಿಬಿರದಲ್ಲಿ ಜಿಲ್ಲಾ ಸಿವಿಲ್ ಮತ್ತು ಸಂಚಾರಿ ಪೊಲೀಸ್ ಸಿಬ್ಬಂದಿಗೆ ಜೀವರಕ್ಷಣೆ ಕುರಿತು ತರಬೇತಿ ನೀಡಲಾಯಿತು.ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಶಿಬಿರ ಉದ್ಘಾಟಿಸಿ ಮಾತನಾಡಿ, ರಸ್ತೆ ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ಪ್ರತ್ಯಕ್ಷದರ್ಶಿಗಳು ಆಪತ್ಭಾಂದವರಂತೆ ಪ್ರಥಮ ಚಿಕಿತ್ಸಾ ಕ್ರಮಗಳನ್ನು ಅನುಸರಿಸಿದರೆ ಗಾಯಾಳುಗಳ ಜೀವ ರಕ್ಷಿಸಬಹುದು. ಈ ನಿಟ್ಟಿನಲ್ಲಿ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯರ ತಂಡವು ಜಿಲ್ಲಾ ಪೊಲೀಸ್ ಸಿಬ್ಬಂದಿಗಾಗಿ ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಮತ್ತು ಪ್ರಥಮ ಚಿಕಿತ್ಸೆ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಸಂಭವನೀಯ ಮರಣ ಪ್ರಮಾಣವನ್ನು ತಗ್ಗಿಸುವುದು ವಿಶ್ವ ಆಘಾತ ದಿನಾಚರಣೆಯ ಉದ್ದೇಶವಾಗಿದೆ. ರಸ್ತೆ ಅಪಘಾತ ಸಂದರ್ಭಗಳಲ್ಲಿ ಸಂಚಾರಿ ಅಥವಾ ಸಿವಿಲ್ ಪೊಲೀಸರು ಮೊದಲಿಗೆ ಘಟನಾ ಸ್ಥಳಕ್ಕೆ ಧಾವಿಸುತ್ತಾರೆ. ಆಪದ್ಭಾಂಧವರಂತೆ ಇವರು ಕಾರ್ಯ ನಿರ್ವಹಿಸಲು ನೆರವಾಗಲು ಈ ತರಬೇತಿ ಶಿಬಿರ ಆಯೋಜಿಸಲಾಗಿದೆ. ಎಲ್ಲ ಸಿಬ್ಬಂದಿ ಶಿಬಿರದ ಸದುಪಯೋಗ ಪಡೆದು ಗಾಯಾಳುಗಳ ಪಾಲಿಗೆ ದೇವರಾಗಿ ಎಂದು ಹೇಳಿ ಜೀವರಕ್ಷಣೆಗೆ ಪ್ರಥಮ ಚಿಕಿತ್ಸೆಯ ಕ್ರಮಗಳನ್ನು ವಿವರಿಸಿದರು.ಶಿಬಿರದ ಸಂಚಾಲಕ ಡಾ.ದಯಾನಂದ ಬಿರಾದಾರ ಮಾತನಾಡಿ, ರಸ್ತೆ ಅಪಘಾತದ ಸಂದರ್ಭಗಳಲ್ಲಿ ಪ್ರತ್ಯಕ್ಷದರ್ಶಿಗಳು ಗಾಯಾಳುಗಳ ಫೋಟೋ ಮತ್ತು ವಿಡಿಯೋ ಮಾಡುವುದನ್ನು ಬಿಟ್ಟು, ಗಾಯಾಳುವಿನ ಬಾಯಲ್ಲಿ ನೀರನ್ನು ಹಾಕದೆ, ಅಂಬುಲೆನ್ಸ್‌ಗೆ ಕರೆ ಮಾಡಬೇಕು. ಮನುಷ್ಯ ಪ್ರತಿರೂಪಗಳ ಮೇಲೆ ಮುಂದುವರೆದ ಆಘಾತ ಜೀವನ ಆಸರೆ ಮತ್ತು ಹೃದಯ ಶ್ವಾಸಕೋಶಗಳ ಪುನರುಜ್ಜೀವನ ತರಬೇತಿ ನೀಡಲಾಯಿತು.
ಈ ವೇಳೆ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕರಾದ ಡಾ.ಗಿರೀಶ ಕುಲ್ಲೊಳ್ಳಿ, ಡಾ.ವಿಕ್ರಂ ಸಿಂದಗಿಕರ, ಅರವಳಿಕೆಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವಿಜಯ ಕಟ್ಟಿ, ಡಾ.ಸಂತೋಷ ಕರ್ಜಗಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿ ನೀಡಿದರು.ಈ ವೇಳೆ ನಗರ ಡಿವೈಎಸ್ಪಿ ಬಸವರಾಜ ಯಲಿಗಾರ, ಪೊಲೀಸ್ ಅಧಿಕಾರಿ ಎಸ್.ಕೆ.ಗೋಟ್ಯಾಳ, ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ನ್ಯಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಉದಯಕುಮಾರ ನುಚ್ಚಿ ಮುಂತಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಪ್ರಾಯೋಗಿಕ ತರಬೇತಿಯನ್ನು ಪಡೆದ ಸಂಪನ್ಮೂಲ ವ್ಯಕ್ತಿಗಳಾದ ವೈದ್ಯರೊಂದಿಗೆ ಸಂವಾದ ನಡೆಸಿದರು.ಕೋಟ್‌ರಸ್ತೆ ಅಪಘಾತದ ಸಂದರ್ಭಗಳಲ್ಲಿ ಪ್ರತ್ಯಕ್ಷದರ್ಶಿಗಳು ಗಾಯಾಳುಗಳ ಫೋಟೋ ಮತ್ತು ವಿಡಿಯೋ ಮಾಡುವುದನ್ನು ಬಿಟ್ಟು, ಗಾಯಾಳುವಿನ ಬಾಯಲ್ಲಿ ನೀರನ್ನು ಹಾಕದೆ, ಅಂಬುಲೆನ್ಸ್‌ಗೆ ಕರೆ ಮಾಡಬೇಕು. ಅಲ್ಲದೇ, ಗಾಯಕ್ಕೆ ಬಟ್ಟೆಯನ್ನು ಕಟ್ಟಿ ಸಂಗಡಿಗರ ಸಹಾಯದಿಂದ ರಕ್ತಸ್ರಾವ ತಡೆಯಲು ಮತ್ತು ಇತರ ಪ್ರಥಮ ಚಿಕಿತ್ಸೆಯನ್ನು ನೀಡಿ ಅಮೂಲ್ಯ ಸಮಯದಲ್ಲಿ ಗಾಯಾಳುವಿನ ಜೀವ ಉಳಿಸಿ ಪುಣ್ಯ ಕಟ್ಟಿಕೊಳ್ಳಬೇಕು.ಡಾ.ದಯಾನಂದ ಬಿರಾದಾರ, ಜಿಲ್ಲಾ ವೈದ್ಯಕೀಯ ಸಂಘದ ನಿಕಟಪೂರ್ವ ಅಧ್ಯಕ್ಷ