ಸಾರಾಂಶ
ಶಿವಾಜಿ ಮೊಘಲ ಸಾಮ್ರಾಜ್ಯದ ವಿರುದ್ಧ ಹೋರಾಡುವ ಮೂಲಕ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು
ಹರಪನಹಳ್ಳಿ: ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರ ಆದರ್ಶ ನಾವೆಲ್ಲರೂ ಪಾಲಿಸೋಣ ಎಂದು ತಹಸೀಲ್ದಾರ್ ಬಿ.ವಿ. ಗಿರೀಶಬಾಬು ತಿಳಿಸಿದರು.
ಪಟ್ಟಣದ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ಗುರುವಾರ ತಾಲೂಕಾಡಳಿತದಿಂದ ಅಯೋಜಿಸಿದ್ದ ಕಾಯಕ ಶರಣರು, ವಚನ ಶ್ರೇಷ್ಠ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಲಕ್ಷ್ಮಣ್ ರಾವ್ ಜಾಧವ್ ಮಾತನಾಡಿ, ಶಿವಾಜಿ ಮೊಘಲ ಸಾಮ್ರಾಜ್ಯದ ವಿರುದ್ಧ ಹೋರಾಡುವ ಮೂಲಕ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದ ಅವರು, ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ಪಟ್ಟಣದಲ್ಲಿ ನಿವೇಶನ ಕಲ್ಪಿಸಿಕೊಡುವಂತೆ ತಾಲೂಕಾಡಳಿತಕ್ಕೆ ಮನವಿ ಮಾಡಿದರು.
ವಚನ ಶ್ರೇಷ್ಠ ಸರ್ವಜ್ಞ ಕುರಿತು ಉಪನ್ಯಾಸ ನೀಡಿದ ಶಿಕ್ಷಕ ಮೈಲಾರಪ್ಪ ಅವರು, ಸರ್ವ ಜ್ಞಾನ ಹೊಂದಿದ್ದ ಸರ್ವಜ್ಞ ಅವರು ತಮ್ಮ ತ್ರಿಪದಿಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ್ದರು ಎಂದ ಅವರು ಕುಂಬಾರ ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿದ್ದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಈ ಸಮುದಾಯಕ್ಕೆ 2ಎ ಪ್ರಮಾಣಪತ್ರ ನೀಡಬೇಕೆಂದು ಒತ್ತಾಯಿಸಿದರು.ಬೆಸ್ಕಾಂ ಇಲಾಖೆಯ ಮೇಲ್ವಿಚಾರಕ ಈರಣ್ಣ ಕಾಯಕ ಶರಣರು ಕುರಿತು ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕುಂಬಾರ ಸಮಾಜದ ಅಧ್ಯಕ್ಷ ಅಜ್ಜಪ್ಪ ಬಂಡ್ರಿ, ಶಿವ ಶರಣರು ಸಮಾಜದ ಅಧ್ಯಕ್ಷ ಶಿವರಾಜ ಕಾಶೆ, ಗ್ರಾಪಂ ಸದಸ್ಯ ಮಜ್ಜಿಗೇರಿ ಎ. ನಿಂಗಪ್ಪ, ಶಿಕ್ಷಕ ದೇವರಾಜ ಸೇರಿದಂತೆ ಮತ್ತಿತರರಿದ್ದರು.