ಆಧ್ಯಾತ್ಮಿಕ, ಆಧುನಿಕ ಗುರು ಮಹತ್ವವನ್ನು ಅನುಸರಿಸಿ: ಡಾ.ನಿರ್ಮಲಾನಂದನಾಥ ಶ್ರೀಗಳು

| Published : Jul 11 2025, 11:48 PM IST

ಆಧ್ಯಾತ್ಮಿಕ, ಆಧುನಿಕ ಗುರು ಮಹತ್ವವನ್ನು ಅನುಸರಿಸಿ: ಡಾ.ನಿರ್ಮಲಾನಂದನಾಥ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅಪೂರ್ಣತ್ವದಿಂದ ಪೂರ್ಣತ್ವದೆಡೆಗೆ ಕೊಂಡೊಯ್ಯುವ ಶಕ್ತಿಯೇ ಗುರು. ಕತ್ತಲೆ ಎಂಬ ಅಜ್ಞಾನದಿಂದ ನಮ್ಮನ್ನು ಬೆಳಕೆನೆಡೆಗೆ ಕೊಂಡೊಯ್ಯುವ ಶಕ್ತಿಯೇ ಗುರು. ಗುರು ಎಂದರೆ ಸಾಕ್ಷಾತ್ ಪರಮೇಶ್ವರನ ಅವತಾರ. ಸನ್ಯಾಸದ ಬದುಕು ಕತ್ತಿಯ ಮೇಲಿನ ಬದುಕಿನಂತೆ. ಸಮಾಜವನ್ನು ತಿದ್ದುವ ಸಂದರ್ಭದಲ್ಲಿ ಸನ್ಯಾಸಿಗಳಿಗೆ ಹೆಚ್ಚು ಪರೀಕ್ಷೆ ಎದುರಾಗುತ್ತವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಮಾಜದ ಆಧ್ಯಾತ್ಮಿಕ ಗುರುಗಳು, ಆಧುನಿಕ ಗುರುಗಳ ಮಹತ್ವವನ್ನು ತಮ್ಮ ಬದುಕಿನಲ್ಲಿ ಅನುಸರಿಸಿದರೆ ನಿಮ್ಮ ಜೀವನಕ್ಕೆ ಅದು ದೊಡ್ಡ ಶಕ್ತಿಯಾಗಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಮಹೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ನಿಮ್ಮ ಬದುಕಿಗೆ ಸಂಸ್ಕಾರಯುತ ಹಾಗೂ ಮಾನವೀಯ ಮೌಲ್ಯ, ಗುಣಗಳನ್ನು ಬಿತ್ತುವವರು ಆಧ್ಯಾತ್ಮಿಕ ಗುರುಗಳಾಗಿರುತ್ತಾರೆ. ಹಾಗಾಗಿ ಬದುಕನ್ನು ಸುಂದರಗೊಳಿಸುವ ಗುರುಗಳನ್ನು ಸ್ಮರಿಸಿಕೊಳ್ಳಬೇಕು ಎಂದರು.

ಒಳ್ಳೆಯ ಮತ್ತು ಶುಭ್ರವಾದ ಚಿಂತನೆಗಳ ಬದುಕನ್ನು ಕಟ್ಟಿಕೊಡುವ ಮನಸ್ಸಿನಲ್ಲಿ ಪ್ರತಿಷ್ಠಾಪಿಸುವ ಪ್ರಕ್ರಿಯೆಯನ್ನು ಸನ್ಯಾಸ ಎನ್ನಲಾಗುತ್ತದೆ. ಇಂತಹ ಸ್ಥಾನಕ್ಕೆ ನಮ್ಮನ್ನು ತಂದತಹ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳನ್ನು ಸ್ಮರಿಸುವ ದಿನ ಇದಾಗಿದೆ ಎಂದರು.

ಸಮಾಜವನ್ನು ತಿದ್ದುವ ಅಥವಾ ಕಟ್ಟುವ ಸಮಯದಲ್ಲಿ ಹಲವು ಸಮಸ್ಯೆಗಳು ಸನ್ಯಾಸಿಗಳಿಗೆ ಎದುರಾಗುತ್ತವೆ. ಅಷ್ಟು ಪ್ರಮಾಣದಲ್ಲಿ ಪ್ರೀತಿಸುವ ಭಕ್ತರು ಕೂಡ ಇರುತ್ತಾರೆ. ಎಲ್ಲವನ್ನೂ ನಾವು ಸಮಾನವಾಗಿ ನೋಡಬೇಕಿದೆ ಎಂದರು.

ಅಪೂರ್ಣತ್ವದಿಂದ ಪೂರ್ಣತ್ವದೆಡೆಗೆ ಕೊಂಡೊಯ್ಯುವ ಶಕ್ತಿಯೇ ಗುರು. ಕತ್ತಲೆ ಎಂಬ ಅಜ್ಞಾನದಿಂದ ನಮ್ಮನ್ನು ಬೆಳಕೆನೆಡೆಗೆ ಕೊಂಡೊಯ್ಯುವ ಶಕ್ತಿಯೇ ಗುರು. ಗುರು ಎಂದರೆ ಸಾಕ್ಷಾತ್ ಪರಮೇಶ್ವರನ ಅವತಾರ. ಸನ್ಯಾಸದ ಬದುಕು ಕತ್ತಿಯ ಮೇಲಿನ ಬದುಕಿನಂತೆ. ಸಮಾಜವನ್ನು ತಿದ್ದುವ ಸಂದರ್ಭದಲ್ಲಿ ಸನ್ಯಾಸಿಗಳಿಗೆ ಹೆಚ್ಚು ಪರೀಕ್ಷೆ ಎದುರಾಗುತ್ತವೆ ಎಂದು ಹೊಸದಾಗಿ ಸನ್ಯಾಸ ಸ್ವೀಕರಿಸಿದ ಸನ್ಯಾಸಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಗುರುಗಳನ್ನು ಸ್ಮರಿಸುವ ದಿನ. ಪ್ರತಿಯೊಬ್ಬರ ಬದುಕಿನಲ್ಲಿ ಕೂಡ ಗುರು ಬಂದಿರುತ್ತಾರೆ. ಅಂತಹ ಗುರುವಿಗಾಗಿ ಹಂಬಲಿಸುವ ದಿನ ಆಗಬೇಕು. ಆಧುನಿಕ ಸಮಾಜದಲ್ಲಿ ಗುರುವನ್ನು ಹಂಬಲಿಸುವ ಮನಸ್ಥಿತಿ ಕಡಿಮೆ. ಸನಾತನ ಪರಂಪರೆ ನೋಡಿದಾಗ ಗುರುವಿಗೆ ಒಂದು ದಿನ ಸೀಮಿತವಲ್ಲ. ಪ್ರತಿನಿತ್ಯವೂ ಕೂಡ ಶಿಬಿರ ಏಳಿಗೆಗೆ ಗುರು ಶ್ರಮಿಸುತ್ತಾರೆ ಎಂದರು.

ಆಧ್ಯಾತ್ಮದಿಂದ ನಮ್ಮನ್ನು ನಾವು ಅರಿತುಕೊಳ್ಳಲು ನಮ್ಮ ಬದುಕನ್ನು ಸಂಸ್ಕಾರಯುತವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಶ್ರೀಕ್ಷೇತ್ರದಲ್ಲಿ ಗುರುಗಳು ಈ ಸಮಾಜಕ್ಕೆ ಸಂಸ್ಕಾರಯುಕ್ತ ಪ್ರಜೆಗಳನ್ನು ನೀಡುತ್ತಿದ್ದಾರೆ ಎಂದರು.

ವೈಯಕ್ತಿಕವಾಗಿ ನಿರ್ಮಲಾನಂದನಾಥ ಶ್ರೀಗಳ ಸಾನಿಧ್ಯ ನನ್ನ ಬದುಕನ್ನು ಆವರಿಸಿದೆ. ಗುರುಗಳ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ಆದರೆ, ಆಧುನಿಕ ಜಗತ್ತಿನಲ್ಲಿ ಮಾನವೀಯ ಮೌಲ್ಯ ಮರೆತು ಬದುಕುತ್ತಿದ್ದೇವೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಎಲ್ಲಾ ರಂಗಗಳಲ್ಲಿಯೂ ಜ್ಞಾನವನ್ನು ಪಸರಿಸುವಲ್ಲಿ ನಿರ್ಮಲಾನಂದನಾಥ ಶ್ರೀಗಳು ಅಗ್ರಗಣ್ಯರಾಗಿದ್ದಾರೆ. ಅವರ ಜ್ಞಾನ ಅಗಾಧ. ಈ ಆಧುನಿಕ ಜಗತ್ತಿಗೆ ವಿಜ್ಞಾನದ ನೆಲೆಗಟ್ಟಿನಲ್ಲಿ ಏನು ಬೇಕು ಎಂದು ಅರಿತಿದ್ದಾರೆ. ಯೋಗವಂತರನ್ನು ಯೋಗ್ಯವಂತರನ್ಮಾನಾಗಿ ಮಾಡುವ ಯೋಗವಂತರಲ್ಲದವರನ್ನು ಯೋಗ್ಯವಂತರನ್ನಾಗಿ ಮಾಡುವ ಶಕ್ತಿ ಗುರುಗಳಿಗಿದೆ ಎಂದರು.

ಗುರು ಶಿಷ್ಯರ ಬಾಂಧವ್ಯ ಇಂದು ಕುಸಿಯುತ್ತಿದೆ. ಬೆಲೆಯುಳ್ಳ ವಸ್ತುಗಳನ್ನು ನಾವು ಖರೀದಿಸಬಹುದು. ಮೌಲ್ಯವನ್ನು ನಾವು ಬೆಳೆಸಿಕೊಳ್ಳಬೇಕು. ಮನಸ್ಸು ಕೂಡ ಆರೋಗ್ಯವಾಗಿರಬೇಕು. ಶುದ್ಧಮನಸ್ಕರಾಗಿ ಬದುಕಬೇಕು ಎಂದರು.

ಭೈರವೈಕ್ಯಶ್ರೀಗಳ ಗದ್ದುಗೆಗೆ ಪೂಜೆ:

ಗುರುಪೂರ್ಣಿಮೆ ಪ್ರಯುಕ್ತ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯವನ್ನು ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಡಾ.ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ, ಅಭಿಷಕ ಹಾಗೂ ಮಹಾ ಮಂಗಳಾರತಿ ನೆರವೇರಿತು.

ನಂತರ ಕ್ಷೇತ್ರಾಧಿದೇವತೆಗಳಾದ ಚಂದ್ರಮೌಳೇಶ್ವರಸ್ವಾಮಿ, ಗಂಗಾಧರೇಶ್ವರಸ್ವಾಮಿ, ಮಾಳಮ್ಮದೇವಿ ಮತ್ತು ಸ್ಥಂಬಾಂಬಿಕೆದೇವಿಗೆ ಪೂಜೆ ನೆರವೇರಿತು. ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಶ್ರೀಗಳ ಗದ್ದುಗೆಗೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ವಿವಿಧ ಶಾಖಾ ಮಠಗಳ ಸ್ವಾಮೀಜಿಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಬೆಳಗ್ಗೆಯಿಂದ ಶ್ರೀಮಠದಲ್ಲಿ ಹೋಮ, ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆ ಕಾರ್ಯಕ್ರಮದ ನಂತರ ಗಿರಿಪ್ರದಕ್ಷಿಣೆ ನಡೆಯಿತು.

ಇದೇ ವೇಳೆ ಭಕ್ತರು ನಿರ್ಮಲಾನಂದನಾಥಶ್ರೀಗಳಿಗೆ ಹೂ ಮಾಲೆ ಹಾಕಿ ಪಾದಪೂಜೆ ಮಾಡಿದರು. ಫಲ ನೀಡಿ ಗುರುವಂದನೆ ಸಲ್ಲಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಭಕ್ತರು ಸರತಿ ಸಾಲನಲ್ಲಿ ನಿಂತು ಗುರುವಂದನೆ ಸಲ್ಲಿಸಿದರು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಂದನಾಥಸ್ವಾಮೀಜಿ, ಶಂಭುನಾಥಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ಗುಣನಾಥಸ್ವಾಮೀಜಿ, ಸೌಮ್ಯನಾಥಸ್ವಾಮೀಜಿ, ಪ್ರಕಾಶನಾಥಸ್ವಾಮೀಜಿ, ಮಂಗಳನಾಥಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಕುಮಾರ, ಬೆಂಗಳೂರು ವಿವಿ ಉಪಕುಲಪತಿ ದಿನಕರ್‌ಶೆಟ್ಟಿ, ಆದಿಚುಂಚನಗಿರಿ ವಿವಿ ಉಪಕುಲಪತಿ ಶ್ರೀಧರ್ ಸೇರಿದಂತೆ ಹಲವರು ಇದ್ದರು.