ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಪಾಲಿಸಿ

| Published : Dec 02 2023, 12:45 AM IST

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಶಿವಾಚಾರ್ಯರ ಸಂದೇಶವನ್ನು ಧಿಕ್ಕರಿಸುತ್ತಿರುವ ಸಮಾಜ ಧಾರ್ಮಿಕ ವಿಚಾರಗಳಿಂದಲೇ ಸಮುದಾಯಗಳ ನಡುವೆ ಸಾಮರಸ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ವಿಷಾದಿಸಿದರು. ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ ಕಾರ್ತಿಕೋತ್ಸವ ಅಂಗವಾಗಿ ಇಷ್ಟಲಿಂಗ ಮಹಾಪೂಜೆ, ಸಾಮೂಹಿಕ ವಿವಾಹ ಮಹೋತ್ಸವ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬ್ಯಾಡಗಿ: ‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಶಿವಾಚಾರ್ಯರ ಸಂದೇಶವನ್ನು ಧಿಕ್ಕರಿಸುತ್ತಿರುವ ಸಮಾಜ ಧಾರ್ಮಿಕ ವಿಚಾರಗಳಿಂದಲೇ ಸಮುದಾಯಗಳ ನಡುವೆ ಸಾಮರಸ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ವಿಷಾದಿಸಿದರು.

ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದ ಕಾರ್ತಿಕೋತ್ಸವ ಅಂಗವಾಗಿ ಇಷ್ಟಲಿಂಗ ಮಹಾಪೂಜೆ, ಸಾಮೂಹಿಕ ವಿವಾಹ ಮಹೋತ್ಸವ ಕಾರ‍್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಿವಾಚಾರ‍್ಯರು ಸೇರಿದಂತೆ ಶರಣರು, ಮಠಾಧೀಶರು, ದಾರ್ಶನಿಕರು ಸಮಾಜವನ್ನು ಸರಿದಾರಿಯಲ್ಲಿ ನಡೆಯುವಂತೆ ಆಯಾ ಕಾಲಘಟ್ಟದಲ್ಲಿ ಅಗತ್ಯ ಸಲಹೆ, ಸೂಚನೆಗಳನ್ನು ಮತ್ತು ಸಂದೇಶ ನೀಡುತ್ತಾ ಬಂದಿದ್ದಾರೆ, ಆದರೆ ತಾನು ಹೆಚ್ಚು ತನ್ನದು ಹೆಚ್ಚು ಎಂಬ ಮನೋಭಾವನೆಯೊಂದಿಗೆ ಧಾರ್ಮಿಕ ಅಂಧಕಾರದಲ್ಲಿ ಮುಳುಗಿರುವ ಜನರು ನಿತ್ಯವೂ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದರು.

ಬಡಿದಾಡಿಕೊಳ್ಳುವುದು ನಿಲ್ಲಲಿ: ಕಳೆದೆರಡು ದಶಕದಿಂದ ಧರ್ಮವನ್ನು ಉಳಿಸಿಕೊಳ್ಳುವ ಹೋರಾಟ ಜೋರಾಗಿಯೇ ನಡೆದಿದೆ. ಧಾರ್ಮಿಕವಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜ ಸಮಾಜಗಳ ನಡುವೆ, ದೇಶ ದೇಶಗಳ ನಡುವೆ ಬಡಿದಾಟ ಆರಂಭವಾಗಿದೆ. ಹೀಗಾಗಿ ಸಮಾಜದಲ್ಲಿ ಸಹಜವಾಗಿ ಅಶಾಂತಿಗೆ ಕಾರಣವಾಗುತ್ತಿದೆ. ಕೂಡಲೇ ಶಿವಾಚಾರ‍್ಯರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡುವಂತೆ ಸಲಹೆ ನೀಡಿದರು.

‘ಮಾನವ ಧರ್ಮ ಬೆಂಬಲಿಸಿ: ‘ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಇಂತಹ ಸಾರ್ವತ್ರಿಕ ಸತ್ಯವನ್ನು ಒಪ್ಪಿಕೊಳ್ಳದಿದ್ದರೆ ಸಮಾಜದ ಪರಿವರ್ತನೆ ಸಾಧ್ಯವಿಲ್ಲ, ಮಠಾಧೀಶರು ಧಾರ್ಮಿಕ ಚಿಂತಕರು, ಸಂತರು ಸನಾತನ ಕಾಲದಿಂದಲೂ ಇಂತಹದ್ದೊಂದು ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದು, ಇನ್ನಾದರೂ ಅಂತಹವರ ಸಂದೇಶಗಳನ್ನು ಬೆಂಬಲಿಸುವಂತೆ ಸಲಹೆ ನೀಡಿದರು.

ಬದುಕುವ ಹಕ್ಕು ಜಗತ್ತಿನ ಸೃಷ್ಟಿ: ಪ್ರತಿಯೊಂದು ಜೀವಿಗಳಿಗೆ ಬದುಕುವ ಹಕ್ಕಿದ್ದು, ಎಲ್ಲರನ್ನು ಸಮಾನತೆ ಹಾಗೂ ಸಮುಷ್ಟಿಭಾವದಿಂದ ಕಾಣಬೇಕಿದೆ. ಸರ್ವರಲ್ಲಿ ಸಹೋದರ ಬಂಧುತ್ವ ಭಾವನೆಗಳನ್ನು ಮೂಡಿಸಬೇಕು. ಧರ್ಮಸಹಿಷ್ಣುಗಳಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮಾಜವನ್ನು ಮುನ್ನಡೆಸುವ ಮನೋಭಾವಗಳನ್ನು ಬೆಳೆಸಿಕೊಳ್ಳಿ ಎಂದರು.

ಧರ್ಮಾಧಿಕಾರಿಗಳ ಶ್ರೇಷ್ಠಕಾರ್ಯ: ಇಲ್ಲಿನ ಸಾಯಿಮಂದಿರದ ಮಂಜಯ್ಯಶಾಸ್ತ್ರಿ ಹಿರೇಮಠರು, ಕಳೆದ ಆರೇಳು ವರ್ಷಗಳಿಂದ ಇಲ್ಲಿ ಧರ್ಮಕಾರ್ಯಗಳನ್ನು ಮುನ್ನಡೆಸುತ್ತಿದ್ದು, ಶಿವದೀಕ್ಷೆ, ಸಾಮೂಹಿಕ ವಿವಾಹ ಮಹೋತ್ಸವ, ಧರ್ಮ ಜಾಗೃತಿ ಸಭೆ ಆಯೋಜಿಸುವ ಮೂಲಕ ಸಮಾಜಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ಇದಕ್ಕೆ ಸ್ಥಳೀಯರ ಸಹಕಾರ ಹಾಗೂ ಧರ್ಮರಕ್ಷಕರು ಕೊಡುಗೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಮಾಜದಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ 5 ಜಂಗಮವಟುಗಳಿಗೆ ಶಿವದೀಕ್ಷೆ ಹಾಗೂ ನೂತನ ವಧುವರರು ಹೊಸ ಜೀವನಕ್ಕೆ ಕಾಲಿಟ್ಟರು. ಗುಡ್ಡದಮಲ್ಲಾಪುರ ದಾಸೋಹಮಠದ ಷ.ಬ್ರ. ಮೂಕಪ್ಪಸ್ವಾಮಿಗಳು, ಬಂಕಾಪುರದ ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳು, ಮಳಲಿ ಸಂಸ್ಥಾನಮಠದ ಗುರುನಾಗಭೂಷಣಶ್ರೀ, ಬ್ಯಾಡಗಿ ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯಶ್ರೀ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶ್ರೀಗಳು, ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರಶ್ರೀ, ಅಗಡಿ ಪ್ರಭುಸ್ವಾಮಿಮಠದ ಗುರುಸಿದ್ದಸ್ವಾಮಿಗಳು, ಕುಮಾರಪಟ್ಟಣ ಪುಣ್ಯಕೋಟಿ ಮಠದ ಬಾಲಯೋಗಿ ಜಗದಿಶ್ವರ ಶ್ರೀಗಳು, ಹಂಸಭಾವಿ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.