ರಸ್ತೆ ನಿಯಮಗಳ ಉಲ್ಲಂಘನೆಯಿಂದ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
ಹೂವಿನಹಡಗಲಿ: ವಾಹನಗಳ ಚಾಲಕರು ಮತ್ತು ಬೈಕ್ ಸವಾರರು ಸೇರಿದಂತೆ ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲನೆ ಮಾಡಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಟಿ. ಅಕ್ಷತಾ ಹೇಳಿದರು.
ಇಲ್ಲಿನ ತಾಲೂಕು ವಕೀಲರ ಸಂಘ, ಹೊಸಪೇಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಜರುಗಿದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆ ನಿಯಮಗಳ ಉಲ್ಲಂಘನೆಯಿಂದ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪಾಲಕರು 18 ವರ್ಷದೊಳಗಿನ ತಮ್ಮ ಮಕ್ಕಳಿಗೆ ವಾಹನ ಮತ್ತು ಬೈಕ್ ಚಾಲನೆ ಮಾಡಲು ನೀಡಬಾರದು, ಚಾಲನಾ ಪರವಾನಗಿ ಪಡೆಯದವರು ವಾಹನ ಚಲಾವಣೆ ಮಾಡುವುದು ಅಪರಾಧ. ಅಪಘಾತದಲ್ಲಿ ವ್ಯಕ್ತಿ ಮೃತರಾದರೆ ಅವರನ್ನು ನಂಬಿದ ಅವರ ಕುಟುಂಬ ಅತಂತ್ರವಾಗುತ್ತದೆ. ರಸ್ತೆಯ ಸುರಕ್ಷತೆ ಪಾಲಿಸಿ ಎಂದು ಹೇಳುವ ಪೊಲೀಸರನ್ನು ಪ್ರಶ್ನಿಸುವ ಘಟನೆಗಳು ಹೆಚ್ಚಾಗುತ್ತಿವೆ. ಯಾರೂ ಕೂಡ ನಿಮಗೆ ಕೆಟ್ಟದ್ದನ್ನು ಮಾಡಬೇಕು ಎಂದು ಹೇಳುವುದಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಜೈನ್ ಮಾತನಾಡಿ, ರಸ್ತೆಯ ನಿಯಮಗಳನ್ನು ನಾವು ಪಾಲಿಸುವ ಮೂಲಕ ನಮ್ಮವರಿಗೂ ನಿಯಮಗಳನ್ನು ಪಾಲಿಸುವಂತೆ ತಿಳಿಸಬೇಕಿದೆ ಎಂದರು.
ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಾದ ಮಹಮ್ಮದ್ ಶರೀಫ್‌ಸಾಬ್, ಸತ್ಯನಾರಾಯಣ್ಣ, ಎಂ.ಪಿ.ಎಂ. ಉಮೇಶ್, ಸಿಪಿಐ ದೀಪಕ್ ಬೂಸರೆಡ್ಡಿ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಶಿವಲಿಂಗಪ್ಪ, ಕಾರ್ಯದರ್ಶಿ ಪ್ರಶಾಂತ್, ಸಹ ಕಾರ್ಯದರ್ಶಿ ಪತ್ರಿಬಸಪ್ಪ, ವಕೀಲರಾದ ಅಟವಾಳಗಿ ಕೊಟ್ರೇಶ್, ಶ್ರೀಧರ, ಮಲ್ಲಿಕಾರ್ಜುನ, ಹನುಮಂತ ಹಾಗೂ ಇತರರಿದ್ದರು.ರಸ್ತೆ ಸುರಕ್ಷತಾ ಮಾಸಾಚರಣೆ ಜಾಥಾವು ನ್ಯಾಯಾಲಯ ಆವರಣದಿಂದ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದ ವರೆಗೂ ನಡೆಯಿತು.