ಸುಂದರ ಸಮಾಜ ನಿರ್ಮಾಣಕ್ಕೆ ಮಹಾತ್ಮರ ಚಿಂತನೆ ಪಾಲಿಸಿ

| Published : Mar 17 2025, 12:31 AM IST

ಸಾರಾಂಶ

ರೇಣುಕಾಚಾರ್ಯರಂತ ಮಹಾತ್ಮರ ಧನಾತ್ಮಕ ಚಿಂತನೆಯಿಂದ ವೀರಶೈವ ಧರ್ಮ ಸಂಸ್ಥಾಪನೆಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾನವೀಯತೆ ಮೌಲ್ಯಗಳನ್ನು ಆಚಾರ-ವಿಚಾರಗಳನ್ನು ಜಗಕ್ಕೆ ಸಾರಿದ ಮಹಾತ್ಮರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯರಂತ ಮಹಾತ್ಮರ ಧನಾತ್ಮಕ ಚಿಂತನೆಯಿಂದ ವೀರಶೈವ ಧರ್ಮ ಸಂಸ್ಥಾಪನೆಗೊಂಡಿದೆ. ಒಬ್ಬ ಮಹಾತ್ಮನಿಂದ ಸಮಾಜಕ್ಕೆ, ದೇಶಕ್ಕೆ ಹಾಗೂ ನಾಡಿಗೆ ಒಳ್ಳೆಯದಾಗಿದ್ದರೆ ಅಂತಹ ಮಹಾತ್ಮರ ಜಯಂತಿ ಆದರ್ಶಪ್ರಾಯವಾಗಿರುತ್ತದೆ ಎಂದರು.

ರೇಣುಕಾಚಾರ್ಯರು ತಮ್ಮ ಇಡೀ ಜೀವನವನ್ನೇ ಸಮಾಜ ಸುಧಾರಣೆಗಾಗಿ ಸವಿಸಿದ್ದು, ಇಂದು ಭೌತಿಕವಾಗಿ ನಮ್ಮ ಬಳಿ ಇರದಿದ್ದರೂ ಅವರು ಹಾಕಿದ ಮಾರ್ಗ ಇಂದು ನಾವೆಲ್ಲ ಅನುಸರಿಸುತ್ತಿದ್ದೇವೆ. ರೇಣುಕಾಚಾರ್ಯರಿಂದ ಐದು ಪೀಠಗಳು ಸ್ಥಾಪನೆಗೊಂಡಿದ್ದು, ಅವು ಇಂದು ಪಂಚಾಚಾರ್ಯರ ಪೀಠಗಳಾಗಿದ್ದು, ಪಂಚ ತತ್ವದಿಂದ ಕೂಡಿದ ಮಠಗಳು ಇಂದು ಅಲ್ಲಲ್ಲಿ ಧರ್ಮ ಸಂಸ್ಥಾಪನಾ ಕಾರ್ಯ ಮಾಡುತ್ತಿವೆ ಎಂದರು.

ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಎಲ್ಲ ಸಮುದಾಯಗಳನ್ನು ಒಂದಾಗಿಸಬೇಕಿದೆ. ಸರ್ಕಾರದ ವತಿಯಿಂದ 34 ಮಹಾತ್ಮರ ಜಯಂತಿ ಆಚರಿಸಲಾಗುತ್ತದೆ. ಇದರ ಉದ್ದೇಶ ಎಲ್ಲರೂ ಒಂದಾಗಿ ಹೋಗಬೇಕು ಎನ್ನುವುದಾಗಿದೆ. ಬೆಳಗಾವಿಯಲ್ಲಿ ಎಲ್ಲ ಸಮಾಜದವರು ಸೇರಿ ಇದೇ ಮೊದಲ ಬಾರಿಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡಿರುವುದು ಮಾದರಿ, ಆದರ್ಶ ಪ್ರಾಯವಾಗಿದೆ. ರೇಣುಕಾಚಾರ್ಯರ ಕೊಡುಗೆ ಹಿಂದು ಸಮಾಜಕಕ್ಕೆ ಅಪಾರವಾಗಿದೆ. ಹಿಂದು ಸಮಾಜವನ್ನು ಒಂದುಗೂಡಿಸುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.

ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಎಲ್ಲ ಸಮುದಾಯಗಳನ್ನು ಒಂದು ಗೂಡಿಸುವ ಕೆಲಸವನ್ನು ಮಠಾಧೀಶರು ಮಾಡಬೇಕಿದೆ. ಉತ್ತರ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಮಠಗಳು ಎಲ್ಲ ಸಮುದಾಯಗಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡುತ್ತ ಬಂದಿವೆ. ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳು ಒಂದಾಗಬೇಕಿದೆ. ನಾವು ಬಸವಣ್ಣನವರನ್ನು ಬಿಟ್ಟಿಲ್ಲ. ರೇಣುಕಾಚಾರ್ಯರರನ್ನು ಬಿಟ್ಟಿಲ್ಲ. ಉತ್ತರ ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ. ವೀರಶೈವ ಧರ್ಮ, ಜಾತಿ, ಪಂಗಡವಲ್ಲ. ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಜನಪ್ರತಿನಿಧಿಗಳು ಸಮಾಜದ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಜಂಗಮ ಸಮುದಾಯಕ್ಕೆ ಸಮಾಜದಲ್ಲಿ ಗುರುವಿನ ಸ್ಥಾನವಿದೆ. ಆದಿ ಜಗದ್ಗುರು ರೇಣುಕಾಚಾರ್ಯರರು ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಲ್ಲ. ಒಡೆದು ಹೋಗಿರುವ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ಒಂದುಗೂಡಿಸುವ ಜವಾವ್ದಾರಿ ಸಂಗಮ ಸಮಾಜದ ಮೇಲಿದೆ. ರಾಜ್ಯ ಸರ್ಕಾರ ಜಾತಿ ಗಣತಿ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಹೇಳಿದರು.

ಉಪನ್ಯಾಸಕ ನೀಡಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಜಯಪುರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಎಸ್.ಎಂ.ಗಂಗಾಧರಯ್ಯ ಅವರು, ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿ ಪುಸ್ತಕ ಓದಿ ತಿಳಿದುಕೊಂಡವರ ಜೀವನ ಅದ್ಭುತ ದಾರಿಯಲ್ಲಿ ಸಾಗುತ್ತದೆ. ವೀರಶೈವ ಲಿಂಗಾಯತ ಮಠಗಳು ಎಲ್ಲ ಸಮಾಜದ ಜನರಿಗೆ ಅನ್ನ ಮತ್ತು ಆಶ್ರಯಗಳನ್ನು ನೀಡುತ್ತ ಬಂದಿವೆ. ಉತ್ತರ ಕರ್ನಾಟಕದ ಮಠಗಳ ಕಾರ್ಯ ತುಂಬಾ ಮೆಚ್ಚುವಂತದ್ದು, ಹೀಗೆ ವೀರಶೈವ ಲಿಂಗಾಯತ ಸಮಾಜ ಎಲ್ಲ ಸಮಾಜದ ಜನರೊಂದಿಗೆ ಒಂದಾಗಿ ನಡೆಯಬೇಕು ಮತ್ತು ಎಲ್ಲ ಸಮಾಜದ ಜನರು ಶ್ರೀ ಜಗದ್ಗುರು ರೇಣುಕಾಚಾರ್ಯರ ಬಗ್ಗೆ ತಿಳಿದುಕೊಳ್ಳಬೇಕು‌. ಸಿದ್ಧಾಂತ ಶಿಖಾಮಣಿನ್ನು ಓದಿ ತಿಳಿದುಕೊಂಡರೆ ಎಲ್ಲ ವಿಷಯಗಳ ಬಗ್ಗೆ ತಿಳಿಯುತ್ತದೆ ಎಂದು ಹೇಳಿದರು.

ವೀರಶೈವರಲ್ಲಿ ಶ್ರೇಣೀಕೃತ ವ್ಯವಸ್ಥೆ ಇದೆ ಎನ್ನುವವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಶಿಖಾಮಣಿಯನ್ನು ಓದಿ ತಿಳಿದುಕೊಂಡರೆ ವೀರಶೈವದಲ್ಲಿ ಶ್ರೇಣೀಕೃತ ವ್ಯವಸ್ಥೆ ಇಲ್ಲ ಎಂಬುದು ಗೊತ್ತಾಗುತ್ತದೆ. ವೀರಶೈವ ಸಮಾಜದ ಎಲ್ಲ ಜನರು ಮೊದಲು ಒಂದಾಗಬೇಕು ಎಂದರು.

ಹುಣಶೀಕಟ್ಟಿ ಹಿರೇಮಠದ ಬಸವರಾಜ ದೇವರು, ದಾವಣಗೆರೆ ಮಾಜಿ ವಿಧಾನ ಪರಿಷತ್‌ ಸದಸ್ಯ ಶಿವಯೋಗಿ ಸ್ವಾಮೀಜಿ, ಸೋಮೇಶ್ವರ ವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಸುರೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಶೇಖರರಯ್ಯ ಸವಡಿ (ಸಾಲಿಮಠ) , ವಿರುಪಾಕ್ಷಯ್ಯ ನೀರಲಗಿಮಠ, ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಕಲ್ಲಪ್ಪ ಗಾಣಗೇರ, ವಿಜಯ ಜಾಧವ, ಎಂ.ಬಿ. ಜಿರಲಿ, ರತ್ನಪ್ರಭಾ ಬೆಲ್ಲದ, ನೀಲಗಂಗಾ ಚರಂತಿಮಠ, ಸಿ.ಬಿ ಸಂಗೊಳ್ಳಿ, ಪತ್ರಕರ್ತ ಶ್ರೀಶೈಲ್ ಮಠದ ಮತ್ತಿತರರು ಉಪಸ್ಥಿತರಿದ್ದರು. ಸರ್ವಮಂಗಳ ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಭವ್ಯ ಮೆರವಣಿಗೆ:

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವದ ಅಂಗವಾಗಿ ಚನ್ನಮ್ಮ ವೃತ್ತದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ , ಕನ್ನಡ ಸಂಸ್ಕೃತ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇಲಾಖೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಚನ್ನಮ್ಮ ವೃತ್ತದಿಂದ ಆರಂಭಗೊಂಡ‌ ಮೆರವಣಿಗೆಯು ಬಿಮ್ಸ್ ಹಾಗೂ ಕೃಷ್ಣ ದೇವರಾಯ ವೃತ್ತದ ಮೂಲಕ ರಂಗಮಂದಿರದವರೆಗೆ ನಡೆಯಿತು.