ಸಾರಾಂಶ
ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಿದಾಗ ಮಾತ್ರ ಅಪರಾಧ ಸಂಖ್ಯೆಗಳು ಇಳಿಮುಖವಾಗಲು ಸಾಧ್ಯ ಎಂದು ಸಾಗರ ಎ.ಎಸ್.ಪಿ ಬೆನಕ ಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಆನಂದಪುರ
ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಿದಾಗ ಮಾತ್ರ ಅಪರಾಧ ಸಂಖ್ಯೆಗಳು ಇಳಿಮುಖವಾಗಲು ಸಾಧ್ಯ ಎಂದು ಸಾಗರ ಎ.ಎಸ್.ಪಿ ಬೆನಕ ಪ್ರಸಾದ್ ತಿಳಿಸಿದರು.ಅವರು ಪಟ್ಟಣದಲ್ಲಿ ಬುಧವಾರ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರ ಜೀವವು ಅತ್ಯ ಅಮೂಲ್ಯವಾದದು. ಪ್ರತಿಯೊಬ್ಬ ವ್ಯಕ್ತಿ ದ್ವಿಚಕ್ರ ವಾಹನಗಳನ್ನು ಚಲಾವಣೆ ಮಾಡುವಾಗ ತಪ್ಪದೇ ಹೆಲ್ಮೆಟ್ ಧರಿಸಿ ತಮ್ಮ ಜೀವವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು. ಚಿಕ್ಕ ಮಕ್ಕಳಿಗೆ ವಾಹನ ಚಲಾವಣೆ ಮಾಡಲು ಕೊಡಬೇಡಿ. ಲೈಸೆನ್ಸ್ ಇಲ್ಲದೆ ವಾಹನ ಚಲಾವಣೆ ಮಾಡುವುದು ಕಾನೂನುಬಾಹಿರವಾಗಿದೆ. ಎಲ್ಲರೂ ಸಂಚಾರ ನಿಯಮದ ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಅಪ್ರಾಪ್ತರು ಬೈಕು ಕಾರು ಚಾಲನೆ ಮಾಡುವುದು ಹೆಚ್ಚಾಗಿದ್ದು, ಅದನ್ನು ತಡೆಗಟ್ಟಬೇಕು. ವಾಹನಗಳ ಮೇಲಿನ ವಿಮಾ ಕಂತು ಸಮರ್ಪಕವಾಗಿ ಕಟ್ಟಿಕೊಳ್ಳಬೇಕು, ಇಲ್ಲವಾದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಆನಂದಪುರ ಪಿಎಸ್ಐ ಪ್ರವೀಣ್ ಮಾತನಾಡಿ, ಅವಸರವೇ ಅಪಾಯ, ನಿಧಾನವೇ ಪ್ರಧಾನ ಹೀಗಾಗಿ ಸಂಚಾರ ನಿಯಮವನ್ನು ಪಾಲಿಸುತ್ತ ಅಪಾಯದಿಂದ ದೂರವಿರಲು ಸಾಧ್ಯ. ಪ್ರಸ್ತುತವಾಗಿ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ನಿಯಮ ಉಲ್ಲಂಘನೆಯೇ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಯುವಕರು ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸದೆ ತಮ್ಮ ಜೀವಕ್ಕೆ ಆಪತ್ತು ತಂದು ಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದಂತಹ ಅಪಘಾತಗಳಲ್ಲಿ ಯುವಕರು ಹೆಚ್ಚು ಮರಣ ಹೊಂದುತ್ತಿದ್ದಾರೆ. ಪ್ರತಿಯೊಬ್ಬರು ವಾಹನ ಚಲಾಯಿಸುವಾಗ ರಸ್ತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪಟ್ಟಣದಲ್ಲಿ, ಆಸ್ಪತ್ರೆ ಹಾಗೂ ಶಾಲಾ ಕಾಲೇಜು ವಲಯದಲ್ಲಿ ವಾಹನವನ್ನು ನಿಧಾನವಾಗಿ ಚಲಾಯಿಸಬೇಕು ಎಂದರು. ಜಾಥಾದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ, ಸಾರ್ವಜನಿಕರು ಹೆಲ್ಮೆಟ್ ಧರಿಸಿ ಭಾಗವಹಿಸಿದ್ದರು.